Publish Date: Mon, 27 Jan 2025 (16:46 IST)
Updated Date: Mon, 27 Jan 2025 (16:50 IST)
ಬೆಂಗಳೂರು: ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಬೆನ್ನಲ್ಲೇ ಭಾವೀ ಪತ್ನಿ ಶಿವಶ್ರೀ ಸ್ಕಂದ ಜತೆ ಸಂಸದ ತೇಜಸ್ವಿ ಸೂರ್ಯ ಅವರು ಇಂದು ಕಾಣಿಸಿಕೊಂಡರು. ಇದೀಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು, ಮತ್ತೇ ಸುದ್ದಿಯಲ್ಲಿದ್ದಾರೆ.
ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದು, ಮದುವೆ ದಿನಾಂಕ ಕೂಡಾ ಫಿಕ್ಸ್ ಆಗಿದೆ. ಇದೇ ವರ್ಷದ ಮಾರ್ಚ್ 1 ಮತ್ತು 2 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಪ್ತಪದಿ ತುಳಿಯಲಿರುವ ಈ ಜೋಡಿಯ ಆರತಕ್ಷತೆ ಮಾರ್ಚ್ 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಅವರು ಜೊತೆಯಾಗಿ ಕಾಣಿಸಿಕೊಂಡು ಶ್ರೀ ಶ್ರೀ ರವಿಶಂಕರ್ ಅವರ ಆಶೀರ್ವಾದ ಪಡೆದರು. ಶಿವಶ್ರೀ ಅವರು ಹೆಸರಾಂತ ಗಾಯಕಿಯಾಗಿದ್ದಾರೆ. ಇವರ ಗಾಯನವನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ತೇಜಸ್ವಿ ಹಾಗೂ ಶಿವಶ್ರೀ ಅವರು 2021ರಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಿವಶ್ರೀಯವರನ್ನು ಸನ್ಮಾನಿಸಿದ್ದರು. ಈ ಫೋಟೋಗಳನ್ನ ಶಿವಶ್ರೀ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.