ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಕೀಲುಗೊಂಬೆ ಆಗಿದ್ದರೆ, ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜಪೇಟೆಯ ಕೇಶವ ಕೃಪದ ಕೃಪಾಕಟಾಕ್ಷ, ನಿರ್ದೇಶನ, ಸೂಚನೆ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.
ಬಿಡದಿಯ ತೋಟದಲ್ಲಿ ಕಳೆದ ಏಳು ದಿನಗಳಿಂದ ನಡೆದ ಜನತಾ ಪರ್ವ 1.ಔ ಹಾಗೂ ಮಿಷನ್ 123 ಕಾರ್ಯಾಗಾರದ ಕೊನೆ ದಿನವಾದ ಇಂದು ಮಾಧ್ಯಮಗಳ ಜತೆ ಮಾತನಾಡಿದರು. ರಾಜ್ಯದಲ್ಲಿ ಇರುವುದು ಸಂಪೂರ್ಣ ಆರೆಸ್ಸೆಸ್ ಸರಕಾರ. ಕೇಶವಕೃಪಕ್ಕೆ ಜನ ಮತ ಹಾಕಿಲ್ಲ ಎಂಬುದನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕು.
ಇವರಿಗೆ ದೇಶದ ಮತ್ತು ರಾಜ್ಯದ ಪ್ರಗತಿಯ ಅಜೆಂಡಾ ಇಲ್ಲ. ಜನರನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವುದೇ ಬಿಜೆಪಿ ಅಜೆಂಡಾ. ನಮಗೆ ಹಿಂದುತ್ವಕ್ಕಿಂತ ಮೊದಲು ದುಡಿಯುವ ಕೈಗೆ ಕೆಲಸ ಬೇಕು, ಅನ್ನ ಬೇಕು. ಸರ್ಕಾರ ಈ ರಾಜ್ಯದ, ದೇಶದ ಬಡವರ ಬಗ್ಗೆ ಗಮನ ಹರಿಸಬೇಕು.
ಈ ದೇಶದಲ್ಲಿ ಸಣ್ಣ ಪುಟ್ಟ ಸಮಾಜಗಳಿಗೆ ಶಿಕ್ಷಣ, ಆರೋಗ್ಯ ಕೊಟ್ಟಿರುವುದು ಆರೆಸ್ಸೆಸ್ ಅಲ್ಲ. ಹಿಂದುತ್ವ ಹಾಗೂ ಕೋಮುವಾದವನ್ನು ಹರಡುವ ಕೆಲಸವನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಅದು ಮಾಡಿಲ್ಲ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರೆಸ್ಸೆಸ್ ಸಭೆಗಳಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾವಾಗಿದೆ ಎಂದು ಹೇಳಿದರು.