Publish Date: Thu, 30 Sep 2021 (12:03 IST)
Updated Date: Thu, 30 Sep 2021 (12:05 IST)
ಬೆಂಗಳೂರು, ಸೆ.30 : ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ರಾತ್ರಿ ಬೆಂಗಳೂರಿನಲ್ಲಿರುವ ಆರ್ಎಸ್ಎಸ್ ಕಚೇರಿಗೆ ತೆರಳಿ ನಾಯಕರನ್ನು ಭೇಟಿ ಮಾಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಉಪ ಚುನಾವಣೆ ಮತ್ತಿತರ ವಿಷಯಗಳ ಬಗ್ಗೆ ಹಿರಿಯ ಆರ್ಎಸ್ಎಸ್ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ನಾಯಕರು ಕೆಲವು ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನಾಯಕತ್ವಕ್ಕೆ ಅಗ್ನಿ ಪರೀಕ್ಷೆಯಾಗಿದೆ. ಬೊಮ್ಮಾಯಿ ನಾಯಕತ್ವದಲ್ಲಿ ಎದುರಾಗುತ್ತಿರುವ ಮೊದಲ ದೊಡ್ಡ ಚುನಾವಣೆ ಇದಾಗಿದೆ. ಹಾನಗಲ್ ಕ್ಷೇತ್ರ ಹಾವೇರಿಯಲ್ಲಿದ್ದು, ಸಿಎಂ ತವರು ಜಿಲ್ಲಾಯಾಗಿದೆ.
ಉಪ ಚುನಾವಣೆ, ದೇವಾಲಯಗಳ ತೆರವು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಆರ್ಎಸ್ಎಸ್ ನಾಯಕರ ಜೊತೆ ಸಮಾಲೋಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.