ಬೆಂಗಳೂರು : ಸಿಲಿಕಾನ್ ಸಿಟಿಯ ಜನಪ್ರಿಯ ಶಾಪಿಂಗ್ ಸೆಂಟರ್ ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್ ಗೆ ಬಿಬಿಎಂಪಿ ಬೀಗ ಹಾಕಿದೆ. ಆಸ್ತಿ ತೆರಿಗೆ ಬಾಕಿ ಹಾಗೂ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಮಂತ್ರಿಮಾಲ್ ನಿಂದ 39 ಕೋಟಿ ರೂಪಾಯಿ ತೆರಿಗೆ ಪಾವತಿ ಬಾಕಿ ಇದ್ದು, 2017ರಿಂದ ತೆರಿಗೆ ಪಾವತಿಸದೇ ವಂಚನೆ ಎಸಗಲಾಗಿದೆ. ಹಲವು ಬಾರಿ ನೋಟೀಸ್ ನೀಡಿದರೂ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮಂತ್ರಿಮಾಲ್ ಗೆ ಬೀಗ ಜಡಿದಿರುವ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದ ಅಧಿಕಾರಿಗಳು, ಶಾಪಿಂಗ್ ಗೆ ಬಂದ ಜನರನ್ನು ವಾಪಸ್ ಕಳುಹಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಆಯುಕ್ತ ಶಿವಸ್ವಾಮಿ, 39 ಕೋಟಿ ತೆರಿಗೆ ಬಾಕಿಯಲ್ಲಿ ಕನಿಷ್ಟ 5 ಕೋಟಿ ರೂಪಾಯಿಯನ್ನು ತಕ್ಷಣ ಪಾವತಿ ಮಾಡಿದಲ್ಲಿ ಮಾಲ್ ತೆರೆಯಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಸದ್ಯಕ್ಕೆ ಮಾಲ್ ಗೆ ಬೀಗ ಹಾಕಲಾಗಿದ್ದು, ಮಾರ್ಷಲ್ ಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.