ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಹಿನ್ನಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಏನೇ ಆದರೂ ನಮ್ಮ ರಾಜ್ಯದಲ್ಲಿ ಅದನ್ನು ಜಾರಿಗೆ ತರಲ್ಲ, ಭಯ ಬೇಡ ಎಂದು ಮುಸ್ಲಿಮರಿಗೆ ಅಭಯ ನೀಡಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಮಾಡಿತ್ತು. ಇದಕ್ಕೆ ರಾಷ್ಟ್ರಪತಿಗಳ ಅಂಕಿತವೂ ಸಿಕ್ಕಿದ್ದು ಕಾನೂನಾಗಿದೆ. ಆದರೆ ಈ ತಿದ್ದುಪಡಿ ಬಿಲ್ ಗೆ ಇಂಡಿಯಾ ಒಕ್ಕೂಟದ ನಾಯಕರಿಂದ ವಿರೋಧವಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡಾ ವಿರೋಧಿಸಿದ್ದಾರೆ.
ಈಗಾಗಲೇ ಅವರು ಯಾವುದೇ ಶಿಕ್ಷೆ ಕೊಟ್ಟರೂ ಸರಿಯೇ, ನಾವು ವಕ್ಫ್ ತಿದ್ದುಪಡಿ ಬಿಲ್ ಜಾರಿ ಮಾಡಲ್ಲ ಎಂದಿದ್ದರು. ಇದೀಗ ಪಶ್ಚಿಮ ಬಂಗಾಲದಲ್ಲಿ ಈ ಹೊಸ ಬಿಲ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಮಮತಾ, ಈ ಗಲಾಟೆ, ದೊಂಬಿಗಳೆಲ್ಲಾ ಯಾಕೆ? ನಾವು ಯಾವುದೇ ಕಾರಣಕ್ಕೂ ನಮ್ಮ ರಾಜ್ಯದಲ್ಲಿ ಈ ಹೊಸ ವಕ್ಫ್ ಕಾನೂನು ಜಾರಿಗೆ ತರಲ್ಲ. ಮುಸ್ಲಿಮರು ಸೇರಿದಂತೆ ಎಲ್ಲಾ ವರ್ಗದವರು ಶಾಂತವಾಗಿರಬೇಕು. ನಮ್ಮಲ್ಲಿ ಇದನ್ನು ಜಾರಿಗೆ ತರಲ್ಲ, ಹಾಗಿರುವಾಗ ಭಯ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.