ಮಂಗಳೂರು: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಆಗಿದೆ. ಚರ್ಚೆ ವೇಳೆ ಕರ್ನಾಟಕದ ವಕ್ಫ್ ಒತ್ತುವರಿ ಕುರಿತು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿಸಿದ್ದರು.
ಅನ್ವರ್ ಮಾಣಿಪ್ಪಾಡಿ ಅವರ ತಯಾರಿಸಿದ್ದ ವರದಿಯನ್ನು ಉಲ್ಲೇಖಿಸಿ ಅಮಿತ್ ಶಾ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದರು. ಅದರ ಬೆನ್ನಲ್ಲೇ ಮಂಗಳೂರಿನಲ್ಲಿರುವ ಅನ್ವರ್ ಮಾಣಿಪ್ಪಾಡಿ ಅವರಿಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆಗಳು ಬರುತ್ತಿವೆ.
ನಿರಂತರ ಇಂಟರ್‌ನೆಟ್ ಕಾಲ್ ಮೂಲಕ ಎರಡು ಮೂರು ದಿನಗಳಿಂದ ಬೆದರಿಕೆ ಬರುತ್ತಿದೆ. ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ ಭಾಷೆಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ನಿನ್ನನ್ನು ಬಿಡುವುದಿಲ್ಲ, ನಿನ್ನ ವರದಿಯಿಂದ ತೊಂದರೆಯಾಗಿದೆ ಅನ್ನೋ ಕರೆಗಳು ಬರುತ್ತಿದೆ ಎಂದು ಅನ್ವರ್ ಅವರು ದೂರಿದ್ದಾರೆ.
ನನ್ನ ವರದಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿದ್ದೇನೆ. ಕಲಬುರಗಿಯಲ್ಲಿ ದೊಡ್ಡ ದೊಡ್ಡ ಮಾಲ್, ಬಿಲ್ಡಿಂಗ್‌ಗಳಿವೆ. ಅವರ ಹೆಸರಲ್ಲಿ ಅಲ್ಲದಿದ್ದರೂ, ಬೇರೆಯವರ ಹೆಸರಲ್ಲಿ ಒತ್ತುವರಿಯಾಗಿದೆ. ಬಹುಪಾಲು ಬೇನಾಮಿ ಆಸ್ತಿ ಎಂದು ಪುನರುಚ್ಚರಿಸಿದ್ದಾರೆ.