ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ದೀದಿ ಇರುವವರೆಗೂ ವಕ್ಫ್ ತಿದ್ದುಪಡಿ ನಿಯಮ ಜಾರಿಗೆ ಬರಲು ಬಿಡಲ್ಲ ಎಂದು ಸ್ವತಃ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಮಾಡಿತ್ತು. ಆದರೆ ಇದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಹಾಗಿದ್ದರೂ ಇದೀಗ ರಾಷ್ಟ್ರಪತಿಗಳ ಅಂಕಿತವೂ ಆಗಿ ತಿದ್ದುಪಡಿ ನಿಯಮಗಳು ಕಾನೂನಾಗಿದೆ.
ಆದರೆ ಈ ಬಗ್ಗೆ ಜೈನ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ದೀದಿ ಮಮತಾ ಬ್ಯಾನರ್ಜಿ ನಿಮಗೆಲ್ಲಾ ವಕ್ಫ್ ಹೊಸ ಕಾಯಿದೆ ಬಗ್ಗೆ ಆತಂಕವಿದೆ ಎಂದು ನನಗೆ ಗೊತ್ತು. ಆದರೆ ನಮ್ಮ ಮೇಲೆ ನಂಬಿಕೆಯಿಡಿ, ಪಶ್ಚಿಮ ಬಂಗಾಲದಲ್ಲಿ ಒಡೆದು ಆಳುವ ನೀತಿ ಉಪಯೋಗಕ್ಕೆ ಬರದು. ನಾವೆಲ್ಲಾ ಒಗ್ಗಟ್ಟಾಗಿ ಇದ್ದೇವೆ ಎಂದು ಸಂದೇಶ ಸಾರೋಣ. ಬಾಂಗ್ಲಾದೇಶದ ಗಡಿ ಭಾಗದ ಪರಿಸ್ಥಿತಿ ನೋಡಿ. ಈ ಬಿಲ್ ಈ ಸಂದರ್ಭದಲ್ಲಿ ಪಾಸ್ ಆಗಬಾರದಿತ್ತು. ನಮ್ಮಲ್ಲಿ 33% ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಏನು ಮಾಡೋಣ?
ಇತಿಹಾಸವೇ ಹೇಳುತ್ತದೆ, ಬಂಗಾಳ, ಪಶ್ಚಿಮ ಬಂಗಾಲ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಇಂಡಿಯಾ ಒಟ್ಟಿಗೇ ಇತ್ತು ಎಂದು. ವಿಭಜನೆಯಾಗಿದ್ದು ನಂತರ. ಇಲ್ಲಿ ವಾಸ ಮಾಡುತ್ತಿರುವವರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.