ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು ಅಧಿಕೃತವಾಗಿ ತೆರೆ ಬೀಳಲಿದೆ. ಕೊನೆಯ ದಿನ ಕುಂಭಕ್ಕೆ ಭೇಟಿ ನೀಡುವವರಿಗೆ ಸ್ಥಳೀಯಾಡಳಿತ ಕೆಲವು ಸೂಚನೆಗಳನ್ನು ನೀಡಿದೆ.
ಕೊನೆಯ ದಿನವಾಗಿರುವುದರಿಂದ ಇಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಕುಂಭಮೇಳಕ್ಕೆ ಭೇಟಿ ನೀಡಲಿದ್ದಾರೆ. ಅದರಲ್ಲೂ ಇಂದು ಶಿವರಾತ್ರಿಯಾಗಿರುವುದರಿಂದ ಭಕ್ತರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಲಿದೆ. ಈ ಕಾರಣಕ್ಕೆ ಸ್ಥಳೀಯ ಆಡಳಿತ ಕೆಲವೊಂದು ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ನಿನ್ನೆ ಸಂಜೆಯಿಂದ ಪ್ರಯಾಗ್ ರಾಜ್ ವಾಹನ ನಿಷೇಧಿತ ವಲಯವಾಗಿ ಮಾರ್ಪಟ್ಟಿದೆ. ಕೆಲವೊಂದು ಅಗತ್ಯ ವಸ್ತುಗಳ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿಲ್ಲ. ಯಾವುದೇ ನೂಕುನುಗ್ಗಲು ಸಂಭವಿಸಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಭಕ್ತಾದಿಗಳು ತಮ್ಮ ಸಮೀಪದ ಸ್ನಾನ ಘಟ್ಟದಲ್ಲೇ ಸ್ನಾನ ಮಾಡಿ ಹತ್ತಿರದ ಶಿವನ ಗುಡಿ ಸಂದರ್ಶಿಸಲು ಸೂಚನೆ ನೀಡಲಾಗಿದೆ. ದಕ್ಷಿಣಿ ಝುನ್ಸಿ ಮಾರ್ಗ ಮತ್ತು ಅರಾಳಿ ಸೆಕ್ಟರ್ ಮೂಲಕ ಬರುವವರಿಗೆ ಅರಾಳಿ ಘಾಟ್ ಮೂಲಕ ಎಂಟ್ರಿಯಾಗಬಹುದು.ಉತ್ತರಿ ಝುನ್ಸಿ ಮಾರ್ಗ ಮೂಲಕ ಬರುವವರಿಗೆ ಹರಿಶ್ಚಂದ್ರ ಘಾಟ್ ಮತ್ತು ಓಲ್ಡ್ ಜಿಟಿ ಘಾಟ್ ಮೂಲಕ ಪ್ರವೇಶಿಸಲು ಅವಕಾಶವಿದೆ. ಪಾಂಡೆ ಕ್ಷೇತ್ರ ಮೂಲಕ ಎಂಟ್ರಿಯಾಗುವವರಿಗೆ ಭಾರದ್ವಾಜ ಘಾಟ್, ನಾಗವಸುಕಿ ಘಾಟ್, ಮೋರಿ ಘಾಟ್, ಕಾಲಿ ಘಾಟ್, ರಾಮ್ ಘಾಟ್ ಮತ್ತು ಹನುಮಾನ್ ಘಾಟ್ ಮೂಲಕ ಪ್ರವೇಶಿಸಲು ಸೂಚನೆ ನೀಡಲಾಗಿದೆ.
ಕುಂಭಮೇಳದಲ್ಲಿ ಕೊನೆಯ ದಿನವಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಯಾವುದೇ ನೂಕುನುಗ್ಗಲು ನಡೆಸದೇ ಶಾಂತ ರೀತಿಯಲ್ಲಿ ಪುಣ್ಯಸ್ನಾನ ಮಾಡಿ ತೆರಳುವಂತೆ ಸ್ಥಳೀಯ ಪೊಲೀಸರು ಮನವಿ ಮಾಡಿದ್ದಾರೆ.