ಬೆಂಗಳೂರು: ರಾಜ್ಯ ಕಾಂಗ್ರೆಸ್ ಶಾಸಕರು ಉತ್ತಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಅಧ್ಯಯನ ಪ್ರವಾಸ ನೆಪದಲ್ಲಿ ಸರ್ಕಾರೀ ಖರ್ಚಿನಲ್ಲೇ ತೆರಳಲು ಪ್ಲ್ಯಾನ್ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ದೆಹಲಿ ಚುನಾವಣೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳದ ಬಗ್ಗೆ ವ್ಯಂಗ್ಯ ಮಾಡಿದ್ದರು. ಕುಂಭಮೇಳಕ್ಕೆ ಹೋದರೆ ಬಡತನ ನಿರ್ಮೂಲನೆಯಾಗಲ್ಲ ಎಂದಿದ್ದರು. ವಿಪರ್ಯಾಸವೆಂದರೆ ಇದೀಗ ಅದೇ ಕಾಂಗ್ರೆಸ್ ಪಕ್ಷದ ಶಾಸಕರೇ ಅಧ್ಯಯನ ನೆಪ ಹೇಳಿಕೊಂಡು ಸರ್ಕಾರೀ ಖರ್ಚಿನಲ್ಲೇ ಕುಂಭಮೇಳಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲವು ಶಾಸಕರು ಸರ್ಕಾರೀ ಖರ್ಚಿನಲ್ಲಿ ಕುಂಭಮೇಳಕ್ಕೆ ಹೋಗಲಿದ್ದಾರೆ. ಇವರಿಗೆ ಸರ್ಕಾರೀ ಹಣ ಬಳಕೆಗೆ ವಿಧಾನಸಭೆಯ ವಸತಿ ಸಮಿತಿಯ ಅನುಮೋದನೆಯೂ ಸಿಕ್ಕಿದೆ. ಹೀಗಾಗಿ ಸರ್ಕಾರೀ ಖರ್ಚಿನಲ್ಲಿ ಈ ಶಾಸಕರು ಕುಂಭಮೇಳಕ್ಕೆ ಹೋಗಿಬರಲಿದ್ದಾರೆ.
ಫೆಬ್ರವರಿ 23 ರಿಂದ 25 ರವರೆಗೆ ಶಾಸಕರು ಕುಂಭಮೇಳಕ್ಕೆ ಹೋಗಲಿದ್ದಾರೆ. ಈ ನಿಯೋಗದಲ್ಲಿ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್, ನಾಗೇಂದ್ರ, ಎಚ್ ಸಿ ಬಾಲಕೃಷ್ಣ, ಬಿ ಶಿವಣ್ಣ, ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ, ಸಿಮೆಂಟ್ ಮಂಜು, ಶಿವರಾಮ್ ಹೆಬ್ಬಾರ್, ಡಾಕ್ಟರ್ ಚಂದ್ರು, ಖನಿ ಫಾತಿಮಾ, ರಾಜು ಕಾಗೆ, ಸ್ವರೂಪ್ ಪ್ರಕಾಶ್ ಸೇರಿದಂತೆ ಹಲವರಿದ್ದಾರೆ. ಅಧ್ಯಯನ ಪ್ರವಾಸ ನೆಪದಲ್ಲಿ ಕುಂಭಮೇಳ ಸುತ್ತಾಡಿ ಪುಣ್ಯ ಸ್ನಾನವನ್ನೂ ಮಾಡಲಿದ್ದಾರೆ. ಇದಕ್ಕೆ ಸ್ಪೀಕರ್ ಅನುಮೋದನೆಯೂ ದೊರೆತಿದೆ.