Publish Date: Mon, 07 Oct 2024 (15:45 IST)
Updated Date: Mon, 07 Oct 2024 (15:47 IST)
ಕೋಲ್ಕತ್ತಾ: ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯ ರೇಪ್ ಆಂಡ್ ಮರ್ಡರ್ ಕೇಸ್ ವಿಚಾರಣೆ ನಡೆಸಿದ ಪೊಲೀಸರು ಈಗ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ವರದಿಯಲ್ಲಿ ಏನಿದೆ ಎಂಬ ಅಂಶಗಳು ಈಗ ಬಯಲಾಗಿದೆ.
ಪ್ರಕರಣದ ವಿಚಾರಣೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಸಂಜಯ್ ರಾಯ್ ಎಂಬಾತನನ್ನು ಬಂಧಿಸಲಾಗಿತ್ತು. ಈತನೇ ಈಗ ರೇಪ್ ಮತ್ತು ಹತ್ಯೆ ಮಾಡಿರುವುದು ಎಂದು ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ. ನಾಗರಿಕಾ ಸೇವಾಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್ ಆಗಸ್ಟ್ 9 ರಂದು ಟ್ರೈನಿ ವೈದ್ಯೆ ಸೆಮಿನಾರ್ ಹಾಲ್ ನಲ್ಲಿ ನಿದ್ರೆಗೆ ಜಾರಿದ್ದಾಗ ಕೃತ್ಯವೆಸಗಿದ್ದಾನೆ ಎಂದು ವಿವರಿಸಲಾಗಿದೆ.
ಚಾರ್ಜ್ ಶೀಟ್ ನಲ್ಲಿ ನೀಡಿದ ವರದಿ ಪ್ರಕಾರವೂ ಈತನೊಬ್ಬನೇ ರೇಪ್ ಆಂಡ್ ಮರ್ಡರ್ ಮಾಡಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಸತತ ಕರ್ತವ್ಯದ ನಂತರ ಬಳಲಿದ್ದ ವೈದ್ಯೆ ವಿಶ್ರಾಂತಿ ಪಡೆಯುತ್ತಿದ್ದಳು. ಈ ವೇಳೆ ಸೆಮಿನಾರ್ ಹಾಲ್ ಗೆ ನುಗ್ಗಿದ ಆರೋಪಿ ಸಂಜಯ್ ರಾಯ್ ಕೃತ್ಯವೆಸಗಿದ್ದಾನೆ. ಬೆಳಿಗ್ಗೆ ವೈದ್ಯೆಯ ಮೃತದೇಹವನ್ನು ಓರ್ವ ಜ್ಯೂನಿಯರ್ ಡಾಕ್ಟರ್ ಪತ್ತೆ ಮಾಡಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.
ತಾನು ಕೃತ್ಯವೆಸಗಿಲ್ಲ ಎಂದು ಆರೋಪಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಆದರೆ ಸಾಕ್ಷ್ಯಗಳೆಲ್ಲವೂ ಆತನ ವಿರುದ್ಧವಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಪ್ರಕರಣ ಸಂಬಂಧ ಸಿಬಿಐ ಆರ್ ಜಿಕರ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಂದೀಪ್ ಘೋಷ್ ಅವರನ್ನೂ ಬಂಧಿಸಿತ್ತು.