ಕೋಲ್ಕತ್ತಾ: ಟ್ರೈನಿ ವೈದ್ಯೆ ಹತ್ಯೆ ಬಳಿಕ ಬೆಳಕಿಗೆ ಬಂದ ಆರ್ ಜಿ ಕರ್ ಆಸ್ಪತ್ರೆಯ ಹಣಕಾಸಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳಿಗೆ ಬಂಧಿತ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಐಷಾರಾಮಿ ಬಂಗಲೆ ಕಂಡು ದಂಗಾಗಿ ಹೋಗಿದ್ದಾರೆ.
ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಟ್ರೈನಿ ವೈದ್ಯೆಯ ಮೇಲೆ ರೇಪ್ ಆಂಡ್ ಮರ್ಡರ್ ನಡೆದಿತ್ತು. ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐಗೆ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ಹಣಕಾಸಿನ ಅವ್ಯವಹಾರಗಳು ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಸಂದೀಪ್ ಘೋಷ್ ರನ್ನು ಬಂಧಿಸಿದ್ದಲ್ಲದೆ, ಹಣಕಾಸಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಇಡಿ ಇಲಾಖೆಗೆ ಸೂಚಿಸಿತ್ತು.
ಅದರಂತೆ ಇಡಿ ಅಧಿಕಾರಿಗಳು ಸಂದೀಪ್ ಘೋಷ್ ಮನೆ ಮೇಲೆ ದಾಳಿ ನಡೆಸಿ ಅವರ ಮೂವರು ಸಹಾಯಕರನ್ನುಬಂಧಿಸಿದೆ. ಮಧ್ಯನಾರಾಯಣಪುರ್ ನಲ್ಲಿರುವ ಸಂದೀಪ್ ಘೋಷ್ ಫಾರ್ಮ್ ಹೌಸ್ ಕಮ್ ಬಂಗಲೆ ನೋಡಿ ಇಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಹುಮಹಡಿಯ ಬಂಗಲೆ ಮತ್ತು ಫಾರ್ಮ್ ಹೌಸ್ ಅಲ್ಲಿದೆ. ಇಲ್ಲಿಗೆ ಸಂದೀಪ್ ತನ್ನ ಕುಟುಂಬದ ಜೊತೆ ಆಗಾಗ ಭೇಟಿ ನೀಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಸಂದೀಪ್ ಘೋಷ್ ನಡೆಸಿರುವ ಹಣಕಾಸಿನ ಅವ್ಯವಹಾರದ ಬಗ್ಗೆ ವಿವಿಧ ಕಡೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಣಕಾಸಿನ ಅವ್ಯವಹಾರವೇ ವೈದ್ಯೆ ಹತ್ಯೆಗೂ ಕಾರಣ ಎಂದು ಕೆಲವರು ಆರೋಪಿಸಿದ್ದರು. ಹೀಗಾಗಿ ಸಿಬಿಐ ಈ ನಿಟ್ಟಿನಲ್ಲೂ ತನಿಖೆ ನಡೆಸುತ್ತಿದೆ.