ಹೈದರಾಬಾದ್: ಖಾಸಗಿ ಕ್ಲಿನಿಕ್‌ನ ವೈದ್ಯರು ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ ಮಹಿಳೆಯೊಬ್ಬರು ಕೋಮಾಕ್ಕೆ ಜಾರಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಫಿಲಂನಗರ ಪೊಲೀಸ್ ಠಾಣೆ ವ್ಯಾಪ್ತಿಯ ಓಯು ಕಾಲೋನಿಯಲ್ಲಿರುವ ಕ್ಲಿನಿಕ್ ನಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ ಮಹಿಳೆಯ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಡಾ.ಮರಿಯಮ್ ಸೈಯದ್ ಹಫೀಜ್ ಎಂದು ಗುರುತಿಸಲಾಗಿರುವ ಸಂತ್ರಸ್ತೆ ನವೆಂಬರ್ 22 ರಂದು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಕ್ಲಿನಿಕ್‌ಗೆ ಭೇಟಿ ನೀಡಿದ್ದರು.
ಆಕೆಯ ಸಹೋದರ ನೀಡಿದ ದೂರಿನ ಪ್ರಕಾರ, ಮಹಿಳೆಗೆ ಅಮೋಕ್ಸಿಸಿಲಿನ್ ಮತ್ತು ಪೆನ್ಸಿಲಿನ್ ಎಂಬ ಪ್ರತಿಜೀವಕಗಳ ಗುಂಪಿನಿಂದ ಅಲರ್ಜಿ ಇದೆ ಎಂದು ತಿಳಿಸಿದ್ದರೂ ಆರೋಪಿ ವೈದ್ಯರು ಮೊನೊಸೆಫ್ ಚುಚ್ಚುಮದ್ದನ್ನು ನೀಡಿದ್ದಾರೆ. ಬಳಿಕ ಸಂತ್ರಸ್ತೆಗೆ ಕೆಲ ರೋಗಲಕ್ಷಣಗಳು ಕಾಣಿಸಿಕೊಂಡಿದೆ.
ರೋಗಲಕ್ಷಣಗಳನ್ನು ಗಮನಿಸಿದ ನಂತರ, ಆರೋಪಿ ವೈದ್ಯರು ಮತ್ತೊಂದು ಚುಚ್ಚುಮದ್ದನ್ನು ನೀಡಿದರು ಎಂದು ವರದಿಯಾಗಿದೆ, ಅದರ ನಂತರ ಹೃದಯ ಸ್ತಂಭನದಿಂದಾಗಿ ಮರಿಯಮ್ ಕುಸಿದು ಬಿದ್ದಿದ್ದಾರೆ.