ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ಗಳಲ್ಲೂ ಅನುಮತಿಸಿದ ಉಚಿತ ಸಮಯಕ್ಕಿಂತ ಹೆಚ್ಚು ಅವಧಿ ತಂಗುವ ವಾಹನಗಳಿಗೆ ಬಿಗ್ ಶಾಲ್ ಎದುರಾಗಿದೆ.
ಡಿ. 8ರಿಂದ ಪ್ರವೇಶ ಶುಲ್ಕ ವಿಧಿಸಲಾಗುವುದು ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಮಿತ ಹೇಳಿದೆ.
ಎರಡೂ ಟರ್ಮಿನಲ್‌ಗಳ ಪಿಕಪ್ ವಲಯದಲ್ಲಿ ಎಲ್ಲ ಖಾಸಗಿ ವಾಹನಗಳು (ಬಿಳಿ ಬೋರ್ಡ್) 8 ನಿಮಿಷ ಉಚಿತವಾಗಿ ಬಳಕೆ ಮಾಡಬಹುದು. ಇದಾದ ಬಳಿಕ ಕಾರುಗಳಿಗೆ 8–13ನಿಮಿಷದ ವರೆಗೆ ₹ 150 ಹಾಗೂ 13–18ನಿಮಿಷದವರೆಗೆ ₹300 ಶುಲ್ಕ ವಿಧಿಸಲಿದೆ. ಈ ಮೂಲಕ ಚಾಲಕರ ಜೇಬಿಗೆ ಕತ್ತರಿ ಬೀಳಲಿದೆ.
ದಂಡದ ಜೊತೆಗೆ ಟೋಯಿಂಗ್ ಶುಲ್ಕವನ್ನೂ ವಸೂಲಿ ಮಾಡಲಾಗುತ್ತದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ವಿವರಿಸಿದೆ.
ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಸೇರಿ ಎಲ್ಲ ವಾಣಿಜ್ಯ ವಾಹನಗಳು ನಿಗದಿಪಡಿಸಿದ ಸ್ಥಳದಲ್ಲಿಯೇ ಪ್ರಯಾಣಿಕರಿಗೆ ಕಾಯಬೇಕು. ನಿಯಮದಂತೆ 10 ನಿಮಿಷ ಉಚಿತವಾಗಿ ಪಾರ್ಕ್ ಮಾಡಬಹುದು. ಟರ್ಮಿನಲ್ ಒಂದಕ್ಕೆ ಬರುವ ವಾಣಿಜ್ಯ ವಾಹನಗಳು P4 ಹಾಗೂ P3 ಪಾರ್ಕಿಂಗ್ ವಲಯಕ್ಕೆ ತೆರಳಬೇಕು. ಟರ್ಮಿನಲ್–2ಕ್ಕೆ ಬರುವ ವಾಹನಗಳು P2 ಪಾರ್ಕಿಂಗ್ ವಲಯಕ್ಕೆ ತೆರಳಬೇಕು.