ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮನೆಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಬೆಂಕಿಯಿಂದ ತಪ್ಪಿಸಿಕೊಳ್ಳಲು ಜನ ಮಹಡಿಯಿಂದ ಜಿಗಿಯುತ್ತಿರುವ ದೃಶ್ಯ ವೈರಲ್ ಆಗಿದೆ.
ದೆಹಲಿ ನಂಗ್ಲೋಯ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಮನೆಯೊಂದಕ್ಕೆ ಬೆಂಕಿ ತಗುಲಿತ್ತು. ಬೆಂಕಿಯ ಕೆನ್ನಾಲಗೆ ಪಕ್ಕದ ಕಟ್ಟಡಕ್ಕೂ ವ್ಯಾಪಿಸುತ್ತಿತ್ತು. ಬಹುಮಹಡಿ ಕಟ್ಟಡ ಇದಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ಕಂಡು ಮನೆಯಲ್ಲಿದ್ದವರು ಭಯಭೀತರಾಗಿದ್ದರು.
ಹೀಗಾಗಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಮನೆಯ ಎರಡನೇ ಮಹಡಿಯಿಂದ ಜಿಗಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ.
ಘಟನೆಯಲ್ಲಿ ಸುಮಾರು 6 ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿ ಅನಾಹುತಕ್ಕೆ ನಿಖರ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಆದರೆ ಇದೀಗ ಬೆಂಕಿ ನಂದಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿದುಬಂದಿದೆ.