ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಪ್ರಚಾರಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಯಂತೆ ಮಲಿನಗೊಂಡಿರುವ ಯಮುನಾ ನದಿಯ ಸ್ವಚ್ಛತಾ ಕಾರ್ಯ ಆರಂಭವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನಾಯಕತ್ವದ ಆಪ್ ಆದ್ಮಿ ಪಕ್ಷಕ್ಕೆ ಸೋಲಾಗಿದೆ. 27 ವರ್ಷಗಳ ಬಳಿಕ ಬಿಜೆಪಿ ಬಹುಮತ ಪಡೆದಿದೆ. ಬಿಜೆಪಿಯು ಅಧಿಕಾರದ ಗದ್ದುಗೆಗೆ ಏರುವ ಮುನ್ನವೇ ಚುನಾವಣೆಯ ವೇಳೆ ನೀಡಿದ ಭರವಸೆಯಂತೆ ಯಮುನಾ ನದಿಗೆ ಕಾಯಕಲ್ಪ ನೀಡುವ ಕೆಲಸವನ್ನು ಶುರು ಮಾಡಿದೆ.
ಯಮುನಾ ನದಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ನಾಲ್ಕು ಹಂತದ ಕಾರ್ಯತಂತ್ರವನ್ನು ಆಧರಿಸಿ ಭಾನುವಾರವೇ ಶುದ್ಧೀಕರಣ ಕಾರ್ಯ ಆರಂಭವಾಗಿದೆ. ನೀರಿನಿಂದ ಕಸ ತೆಗೆಯುವ ಯಂತ್ರಗಳು, ಕಳೆ ಕೊಯ್ಲು ಯಂತ್ರಗಳು, ಹೂಳೆತ್ತುವ ಸಾಧನಗಳು ಮತ್ತು ಡ್ರೆಡ್ಜರ್‌ನೊಂದಿಗೆ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಬಿಜೆಪಿಯ ವಿಜಯೋತ್ಸವದ ಸಂದರ್ಭದಲ್ಲಿ ಮೋದಿ ಅವರು ದೆಹಲಿ ಜನತೆಗೆ ಕೃತಜ್ಞತೆ ಸಲ್ಲಿಸಿ, ಮಾಲಿನ್ಯ ಮುಕ್ತ ಯಮುನಾಗೆ ಪ್ರಯತ್ನ ಮಾಡುವುದಾಗಿ ಪುನರುಚ್ಚರಿಸಿದ್ದರು. ಅದರ ಬೆನ್ನಲ್ಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಶನಿವಾರ ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನೀರಾವರಿ ಮತ್ತು ಪ್ರವಾಹ ನಿಯಂತ್ರಣ) ಅವರಿಗೆ ಯಮುನಾ ನದಿ ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸಿದರು.