ನವದೆಹಲಿ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಕಾಂಗ್ರೆಸ್ ಸಾಗರೋತ್ತರ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಚೀನಾ ನಮ್ಮ ಶತ್ರು ರಾಷ್ಟ್ರವೇ ಅಲ್ಲ ಎನ್ನುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
ಈ ಮೊದಲು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಗೇ ಮುಳುವಾಗಿದ್ದ ಸ್ಯಾಮ್ ಪಿತ್ರೋಡಾ ಈಗ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅವರು ಚೀನಾ ನಮ್ಮ ಶತ್ರು ರಾಷ್ಟ್ರವೇ ಅಲ್ಲ. ಚೀನಾವನ್ನು ಶತ್ರು ರಾಷ್ಟ್ರ ಎಂದು ಯಾಕೆ ಅಂದುಕೊಳ್ಳುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಹಾಗೆ ಭಾವಿಸುವುದು ತಪ್ಪು ಎನ್ನುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
ನಮ್ಮ ಇನ್ನೊಂದು ಗಡಿಯಲ್ಲಿ ಸದಾ ಕಿರಿಕ್ ಮಾಡುತ್ತಲೇ ಇರುವ ಚೀನಾ ಬಗ್ಗೆ ಸ್ಯಾಮ್ ಪಿತ್ರೋಡಾ ಈ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಮೊದಲ ದಿನದಿಂದಲೂ ಚೀನಾವನ್ನು ಶತ್ರು ರಾಷ್ಟ್ರವೆಂದು ಭಾವಿಸುವುದು ನ್ಯಾಯಯುತವಲ್ಲ, ಬದಲಾಗಿ ಪರಸ್ಪರ ಸಹಕಾರವಿರಬೇಕು ಎಂದಿದ್ದಾರೆ.