ಇಂದು ಏನೇ ಹೊಸ ಕೆಲಸ ಮಾಡಬೇಕು ಅಂದ್ರೆ ಒಮ್ಮೆ ಯುಟ್ಯೂಬ್ ನೋಡುತ್ತೇವೆ. ಹೊಸ ಮೊಬೈಲ್, ಕಾರ್, ಬೈಕ್ ಸೇರಿದಂತೆ ಎಲ್ಲ ತರಹದ ಮಾಹಿತಿ ಪಡೆಯಲು ಯುಟ್ಯೂಬ್ ಸಹಾಯ ಪಡೆದುಕೊಳ್ಳುತ್ತೇವೆ.
ಹೆಚ್ಚಿನ ಜನರು ಹೊಸ ಅಡುಗೆ ಮಾಡೋದಕ್ಕಾಗಿ ಯುಟ್ಯೂಬ್ ತಡಕಾಡುತ್ತಾರೆ. ಆದ್ರೆ ನಾಗ್ಪುರದ 25 ವರ್ಷದ ಯುವತಿಯೊಬ್ಬಳು ಯುಟ್ಯೂಬ್ ನೋಡಿ ಆಬಾರ್ಷನ್ ಮಾಡಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು. ಸರಿಯಾದ ಸಮಯಕ್ಕೆ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಬದುಕುಳಿದಿದ್ದಾಳೆ.
ಯುಟ್ಯೂಬ್ ಸಲಹೆ ನೀಡಿದ್ದು ಆಕೆಯ ಇನಿಯ
ಸ್ಥಳೀಯ ಪತ್ರಿಕೆಗಳ ವರದಿ ಪ್ರಕಾರ, ಯುಟ್ಯೂಬ್ ನೋಡಿ ಭ್ರೂಣವನ್ನು ಹೊರತೆಗೆಯಲು ಯುವತಿಗೆ ಆಕೆಯ ಗೆಳೆಯ ಸಲಹೆ ನೀಡಿದ್ದನು. ಇನಿಯನ ಮಾತು ನಂಬಿ ಅಬಾರ್ಷನ್ ಗೆ ಮುಂದಾಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು. ಈ ಘಟನೆ ನಾಗ್ಪುರದ ಯಶೋಧರ ನಗರದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಗ್ಪುರ ಮೂಲದ ಯುವತಿ, 30 ವರ್ಷದ ಶೋಯೆಬ್ ಖಾನ್ ಎಂಬಾತನನ್ನು ಪ್ರೀತಿಸುತಿದ್ದಳು. ಶೋಯೆಬ್ ಖಾನ್ ಮದುವೆಯಾಗೋದಾಗಿ ನಂಬಿಸಿ 2016ರಿಂದಲೂ ಯುವತಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ. ಗರ್ಭಿಣಿ ಎಂಬ ವಿಷಯ ತಿಳಿದು ಕೂಡಲೇ ಶೋಯೆಬ್ ಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಯುವತಿ ಗರ್ಭಿಣಿ ಎಂಬ ವಿಷಯ ತಿಳಿಯುತ್ತಲೇ ಯುಟ್ಯೂಬ್ ನಲ್ಲಿರುವ ಕೆಲ ವೀಡಿಯೋಗಳ ಮೂಲಕ ಗರ್ಭಪಾತ ಹೇಗೆ ಮಾಡಿಕೊಳ್ಳಬೇಕೆಂದು ತೋರಿಸಿದ್ದಾನೆ. ನಂತರ ಔಷಧಿಯನ್ನು ಸಹ ತಂದು ಕೊಟ್ಟಿದ್ದಾನೆ. ಯುವತಿಗೆ ಗರ್ಭಪಾತ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದಾನೆ.