Publish Date: Mon, 18 Nov 2019 (09:05 IST)
Updated Date: Mon, 18 Nov 2019 (09:06 IST)
ಭೋಪಾಲ್ : ನಿದ್ದೆ ಹಾಳು ಮಾಡಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಸೆಕ್ಯೂರಿಟಿ ಗಾರ್ಡ್ ಶೂಟ್ ಮಾಡಿ ಕೊಂದ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಕಬೀರ್ ತೋಮರ್ (25) ಮೃತಪಟ್ಟ ವ್ಯಕ್ತಿ. ಅಕ್ಕು ಶರ್ಮಾ ಕೊಲೆ ಮಾಡಿದ ಸೆಕ್ಯೂರಿಟಿ ಗಾರ್ಡ್. ಸೆಕ್ಯೂರಿಟಿ ಗಾರ್ಡ್ ರಾತ್ರಿ ಪಾಳಿ ಮುಗಿಸಿ ಮನೆಗೆ ಬಂದು ಮಲಗಿದ್ದ ವೇಳೆ ಪಕ್ಕದ ಮನೆಯಲ್ಲಿ ಗಂಡ ಹೆಂಡತಿ ಜಗಳವಾಡುತ್ತಿದ್ದರು. ಇದರಿಂದ ಸೆಕ್ಯೂರಿಟಿ ಗಾರ್ಡ್ ನಿದ್ದೆಗೆ ತೊಂದರೆಯಾಗಿದೆ. ಕೋಪಗೊಂಡ ಆತ ಅವರನ್ನು ಹೆದರಿಸಲು ಗನ್ ತೋರಿಸಿದ್ದಾನೆ. ಆದರೆ ಅದಕ್ಕೆ ಅವರು ಕ್ಯಾರೇ ಎನ್ನದಿದ್ದಾಗ ಪತಿಯ ಎದೆಗೆ ಶೂಟ್ ಮಾಡಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ನೆರೆಹೊರೆಯವರು ಬಂದು ಪೊಲೀಸರಿಗೆ ಮಾಹಿತಿ ನೀಡಿ, ಕಬೀರ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಸಾವನಪ್ಪಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ ಕಾರಣ ಪೊಲೀಸರು ಆರೋಪಿಯನ್ನು ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.