ಮೈಸೂರು: ಯಾರಿಗೇ ಆಗಲಿ ಅಧಿಕಾರ ಶಾಶ್ವತ ಅಲ್ಲ. ಪಕ್ಷ ಹೇಳಿದ ಕೆಲಸ ಮಾಡಬೇಕು ಎಂದು ಡಿಕೆ ಶಿವಕುಮಾರ್ ಗೆ ಸಿಎಂ ಸಿದ್ದರಾಮಯ್ಯ ಪುತ್ರ ಎಂಎಲ್ ಸಿ ಡಾ ಯತೀಂದ್ರ ಸಿದ್ದರಾಮಯ್ಯ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಪಕ್ಷದಲ್ಲಿ ಸುಮ್ಮನೇ ನಾಯಕನಾಗಿಲ್ಲ. ಬರೀ ಭಾಷಣ ಮಾಡಿಕೊಂಡು ನಾಯಕನಾಗಿಲ್ಲ. ಪಕ್ಷಕ್ಕಾಗಿ ಬಾವುಟ ಕಟ್ಟಿದ್ದೀನಿ, ಕಸವನ್ನೂ ಗುಡಿಸಿದ್ದೀನಿ ಎಂದು ಡಿಕೆ ಶಿವಕುಮಾರ್ ನಿನ್ನೆ ಸಿದ್ದರಾಮಯ್ಯ ಬಣಕ್ಕೆ ಟಾಂಗ್ ಕೊಟ್ಟಿದ್ದರು. ಡಿಕೆಶಿ ಹೇಳಿಕೆಗೆ ಈಗ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಇರಲಿ ಡಿಸಿಎಂ ಇರಲಿ ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಪಕ್ಷ ಹೇಳುವ ಕೆಲಸ ಮಾಡಬೇಕು. ಪಕ್ಷ ಹೇಳಿದಂತೆ ಪಾಲಿಸಬೇಕಾದ್ದು ಎಲ್ಲಾ ಕಾರ್ಯಕರ್ತರ ಕರ್ತವ್ಯ. ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಪಕ್ಷ ಕಟ್ಟುವುದು, ಪಕ್ಷದ ಆದೇಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಜವಾಬ್ಧಾರಿಯನ್ನು ನಾವೆಲ್ಲರೂ ನಿಭಾಯಿಸಬೇಕು ಎಂದು ಅವರು ಪರೋಕ್ಷವಾಗಿ ಡಿಕೆಶಿ ಹೇಳಿಕೆಗೆ ಕೌಂಟರ್ ಕೊಟ್ಟಿದ್ದಾರೆ.
ಇದು ಡಿಕೆಶಿ ಹೇಳಿಕೆಗೇ ಕೌಂಟರ್ ಎಂದು ವಿಶ್ಲೇಷಿಸಲಾಗುತ್ತಿದೆ. ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ವಿಚಾರ ತಾರಕಕ್ಕೇರಿರುವಂತೆ ಕಂಡುಬರುತ್ತಿದೆ.