ಬೆಂಗಳೂರು: ಕಾಂಗ್ರೆಸ್ ನಾಯಕರು ನಮ್ಮ ನಡುವೆ ಗೊಂದಲ ಇಲ್ಲ ಎಂದು ಪದೇ ಪದೇ ಹೇಳುತ್ತಿರುವುದನ್ನು ನೋಡಿದರೇ ಯಾಕೋ ಅನುಮಾನವಾಗುತ್ತಿದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯ ಮಾಡಿದ್ದಾರೆ.
ರಾಜ್ಯದಲ್ಲಿ ಈಗ ಮತ್ತೆ ಸಿದ್ದು-ಡಿಕೆಶಿ ಬಣದ ನಡುವೆ ನಾಯಕತ್ವ ವಿಚಾರ ಸದ್ದು ಮಾಡುತ್ತಿದೆ. ಇದರ ನಡುವೆಯೂ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ.
ಇದರ ಬಗ್ಗೆ ಸಿಟಿ ರವಿ ವ್ಯಂಗ್ಯ ಮಾಡಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬ ಮಾತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದರೂ, ಹೈಕಮಾಂಡ್ ಗೊಂದಲ ನಿವಾರಿಸಬೇಕು, ನಿರ್ಧಾರ ಕೈಗೊಳ್ಳಬೇಕು ಎಂದು ಏಕೆ ಹೇಳುತ್ತಿದ್ದಾರೆ? ಬಹುಶಃ ಮುಖ್ಯಮಂತ್ರಿ ಸ್ಥಾನದ ತೀರ್ಮಾನವನ್ನು ವಿಳಂಬಗೊಳಿಸಿದಷ್ಟು ಹೈಕಮಾಂಡಿಗೆ ನೀಡಬೇಕಾದ ಮೊತ್ತವನ್ನು ಹೆಚ್ಚಿಸುವ ಲೆಕ್ಕಾಚಾರ ಇದರಲ್ಲಿದೆಯೇ?
ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟಿನಿಂದಾಗಿ ಅಭಿವೃದ್ಧಿ ಎಂದರೆ ಏನು ಎನ್ನುವುದನ್ನೇ ರಾಜ್ಯ ಮರೆತುಬಿಟ್ಟಿದೆ. ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಸುವುದು ಬಿಟ್ಟು, ತಾನು ಯಾರ ಪರ ನಿಂತರೆ ಹೆಚ್ಚು ಲಾಭ ಗಳಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಕರ್ನಾಟಕದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಸ್ವತಃ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರೇ ಸರ್ಕಾರದಲ್ಲಿನ ಗೊಂದಲದಿಂದ ಆಡಳಿತದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ಅಧಿವೇಶನವನ್ನೇ ಗೊಂದಲದಲ್ಲಿ ಕಳೆದ ಸರ್ಕಾರಕ್ಕೆ ಇನ್ನೂ ದಿಕ್ಕು ದೆಸೆ ಎನ್ನುವುದು ಸಿಕ್ಕಿಲ್ಲ. ಸಿಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಎಂದಿದ್ದಾರೆ.