ಬೆಂಗಳೂರು: ಏನಾದರೂ ಮಾಡ್ಕೊಳ್ಳಿ, ನಾವೇನೂ ಮಾಡಕ್ಕಾಗಲ್ಲ ಎಂದು ರಾಜ್ಯ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಹೇಳಿತಾ ಎನ್ನುವ ಸಂಶಯ ಮೂಡಿದೆ.
ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ನಡುವೆ ಒಳಗೊಳಗೇ ಕಿತ್ತಾಟ ನಡೆಯುತ್ತಿದೆ. ಮಾಧ್ಯಮಗಳ ಮುಂದೆ ಎಲ್ಲಾ ಚೆನ್ನಾಗಿದೆ ಎಂದು ಹೇಳಿಕೊಂಡರೂ ಒಳಗೊಳಗೇ ಉಭಯ ನಾಯಕರ ಬಣ ರಾಜಕೀಯ ಗುಟ್ಟಾಗೇನೂ ಉಳಿದಿಲ್ಲ.
ಇದರ ನಡುವೆ ಹೈಕಮಾಂಡ್ ಮಾತ್ರ ರಾಜ್ಯದ ಸಿಎಂ ಗೊಂದಲ ಬಗೆಹರಿಸುವ ಆಸಕ್ತಿಯೇ ಇಟ್ಟುಕೊಂಡಿಲ್ಲ ಎನಿಸುತ್ತಿದೆ. ಮೊನ್ನೆಯೇ ಮಲ್ಲಿಕಾರ್ಜುನ ಖರ್ಗೆ ನಾಯಕತ್ವ ಸಮಸ್ಯೆ ನಾವು ತಂದಿದ್ದಲ್ಲ. ರಾಜ್ಯ ನಾಯಕರೇ ತಂದುಕೊಂಡಿದ್ದು. ಅವರೇ ಬಗೆಹರಿಸುತ್ತಾರೆ ಎಂದಿದ್ದರು.
ಇತ್ತ ಸಂಸತ್ ಅಧಿವೇಶನದ ಬಳಿಕವಾದರೂ ರಾಜ್ಯ ನಾಯಕರಿಗೆ ಬುಲಾವ್ ಬರಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಈಗಲೂ ಹೈಕಮಾಂಡ್ ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಸೈಲೆಂಟ್ ಆಗಿದೆ. ಇತ್ತ ಖರ್ಗೆ ಮೊನ್ನೆ ನೀಡಿದ ಸಂದೇಶ ಗಮನಿಸಿದರೆ ಹೈಕಮಾಂಡ್ ಸಿಎಂ ಕಿತ್ತಾಟ ಸಮಸ್ಯೆಯನ್ನು ಬಗೆಹರಿಸುವ ಆಸಕ್ತಿಯೇ ಇಲ್ಲದೆ ಕೈ ತೊಳೆದುಕೊಂಡಿದೆಯೇನೋ ಅನಿಸುತ್ತಿದೆ.