Publish Date: Tue, 17 Jul 2018 (14:58 IST)
Updated Date: Tue, 17 Jul 2018 (15:01 IST)
ದಿನಬೆಳಗಾದರೆ ಈ ಭಾಗದ ಮಹಿಳೆಯರಿಗೆ ಒಂದೇ ಭಯ. ಯಾವ ಕ್ಷಣದಲ್ಲಾದರೂ ತಮ್ಮ ಒಳ ಉಡುಪುಗಳು ಮಾಯವಾಗಬಹುದು ಎನ್ನುವ ಆತಂಕ. ಮನೆಯ ಹೊರಗೆ ಒಣಗಲು ಹಾಕಿದ ಒಳ ಉಡುಪುಗಳು ಇದ್ದಕ್ಕಿದ್ದಂತೆ ಮಾಯವಾಗುತ್ತಿವೆ. ಮಾತ್ರವಲ್ಲದೇ ಮನೆಯೊಳಗಿನ ಕವಾಟಿನಲ್ಲಿರುವ ಒಳ ಉಡುಪುಗಳು ಕದ್ದೊಯ್ಯುವ ವಿಕೃತ ಕಾಮಿಯೊಬ್ಬ ಈ ಊರಿಗೆ ಕಾಲಿಟ್ಟಿದ್ದಾನೆ. ಅಷ್ಟಕ್ಕೂ ಈ ಊರು ಯಾವುದು ಅಂತೀರಾ? ಮುಂದೆ ಓದಿ…
ಕಳೆದ ಒಂದುವರೆ ತಿಂಗಳುಗಳಿಂದ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರು ಕಡೆಗಳಲ್ಲಿ ಇಂತಹದೊಂದು ಪ್ರಕರಣ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಹಾಡಹಗಲೇ ಈ ಕೃತ್ಯ ನಡೆಸುವ ವಿಕೃತಕಾಮಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯ ಹೆಂಚು ತೆಗೆದು ಕವಾಟಿನಲ್ಲಿರುವ ಮಹಿಳೆಯಯರ ಒಳ ಉಡುಪುಗಳನ್ನು ಕದ್ದೊಯ್ಯುತ್ತಿದ್ದಾನೆ. ಮುಜುಗರಪಟ್ಟುಕೊಂಡ ಮಹಿಳೆಯರು ಈ ಬಗ್ಗೆ ಯಾರ ಬಳಿಯೂ ಹೇಳದಿದ್ದರಿಂದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ದಿನೇ ದಿನೇ ಈ ವಿಕೃತ ಕಾಮಿಯ ಹಾವಳಿ ಹೆಚ್ಚಾಗಿದ್ದರಿಂದ ಕೊನೆಗೆ ಮಹಿಳೆಯರು ಪಂಚಾಯತ್ ಜನಪ್ರತಿನಿಧಿಗಳಿಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಒಳ ಉಡುಪುಗಳನ್ನು ಕದಿಯುತ್ತಿದ್ದ ಸೈಕೋ ಪಾತ್ ಯಾರು ಎನ್ನುವುದು ಇನ್ನೂ ಕೂಡ ನಿಗೂಢವಾಗಿಯೇ ಉಳಿದಿದೆ.
ಪತಿ-ಪತ್ನಿ ಕೆಲಸಕ್ಕೆ ಹೋಗಿ, ಮಕ್ಕಳು ಶಾಲಾ ಕಾಲೇಜುಗಳಿಗೆ ಹೋದರೆ ಮನೆಯಲ್ಲಿ ಹಗಲಿನ ವೇಳೆಯಲ್ಲಿ ಯಾರೂ ಇರುವುದಿಲ್ಲ. ಹೀಗಾಗಿ ವಿಭಕ್ತ ಕುಟುಂಬವಿರುವ ಮನೆಗೆ ಸುಮಾರು ಮಧ್ಯಾಹ್ನದ ವೇಳೆಗೆ ನುಗ್ಗುವ ಈತ ಮನೆಯ ಕವಾಟಿನಲ್ಲಿರುವ ವಸ್ತೃಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಬಳಿಕ ಅಲ್ಲಿಂದ ಕಾಲ್ಕೀಳುತ್ತಾನೆ. ಅಲ್ಲದೇ ಒಗೆಯಲು ಹಾಕಿದ ಒಳುಡುಪುಗಳನ್ನು ಕದ್ದೊಯ್ಯುವ ಈತನ ಆಟಾಟೋಪದಿಂದ ಜನರು ಆತಂಕಕ್ಕೀಡಾಗಿದ್ದಾರೆ.
ಮಧ್ಯಾಹ್ನ 11 ರಿಂದ 2 ಗಂಟೆಯೊಳಗೆ ಕಳವು ಪ್ರಕರಣ ನಡೆಯುತ್ತಿದ್ದು, ಗ್ರಾಮಸ್ಥರು ಪಂಚಾಯತ್ ಹಾಗೂ ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದಾರೆ.