ಮಂಡ್ಯ: ಇತ್ತಿಚೆಗಷ್ಟೇ ಶಾಸಕ ನರೇಂದ್ರಸ್ವಾಮಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ನಿಯಮ ಮೀರಿ ಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ಈಗ ಅವರದೇ ಕ್ಷೇತ್ರದ ಮಹಿಳೆಯೊಬ್ಬರು ಸಂಘದ ಸಾಲದ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯ 35 ವರ್ಷದ ಮಹಿಳೆಯ ಮಹಾಲಕ್ಷ್ಮಿ ಎಂಬಾಕೆ ಸಾಲದ ಕಂತು ಕಟ್ಟಲಾಗದೇ ನೇಣಿಗೆ ಶರಣಾಗಿದ್ದಾಳೆ. ಈ ಬಗ್ಗೆ ಆಕೆಯ ಪತಿ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಪತ್ನಿಯ ಸಾವಿಗೆ ಸಾಲದ ಕಂತಿನ ಹಣ ಕಟ್ಟುವಂತೆ ಗ್ರಾಮೀಣಾಭಿವೃದ್ಧಿ ಸಂಘದವರು ನೀಡಿದ ಕಿರುಕುಳವೇ ಕಾರಣ ಎಂದಿದ್ದಾರೆ.
ಐದು ತಿಂಗಳ ಹಿಂದೆ ನನ್ನ ಪತ್ನಿ ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ಬುಧವಾರ 1,700 ರೂ. ಕಟ್ಟಬೇಕಿತ್ತು. ಸಂಸ್ಥೆಯ ಪ್ರತಿನಿಧಿಯೊಬ್ಬರು ಮನೆಯ ಬಳಿ ಬಂದು ಕೂಡಲೇ ಕಂತಿನ ಹಣ ಕಟ್ಟುವಂತೆ ಅವಾಚ್ಯ ಶಬ್ಧಗಳಿಂದ ನಿಂದಿದ್ದರು. ಇದರಿಂದ ಮನನೊಂದು ಪತ್ನಿ ನೇಣಿಗೆ ಶರಣಾಗಿದ್ದಾಳೆ ಎಂದು ಪತಿ ದೂರಿನಲ್ಲಿ ವಿವರಿಸಿದ್ದಾರೆ.
ಇತ್ತೀಚೆಗೆ ಶಾಸಕ ನರೇಂದ್ರ ಸ್ವಾಮಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧ ಸಂಸ್ಥೆ ಅಧಿಕ ಬಡ್ಡಿಗೆ ಸಾಲ ನೀಡುತ್ತಿದೆ. ಹೆಸರಿಗೆ ಧರ್ಮಸ್ಥಳ ಅಲ್ಲಿ ನಡೆಯುತ್ತಿರುವುದೆಲ್ಲಾ ಅಧರ್ಮ. ಹೀಗಾಗಿ ಜನ ಸರ್ಕಾರದ ಸಾಲದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದಿದ್ದರು. ಅವರು ಹೇಳಿ ವಾರ ಕಳೆಯುವಷ್ಟರಲ್ಲಿ ಅವರದೇ ಕ್ಷೇತ್ರದಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ದುರದೃಷ್ಟಕರ.