ಮಂಡ್ಯ: ಚನ್ನಪಟ್ಟಣದಲ್ಲಿ ಚುನಾವಣೆಗಾಗಿ ನಾಗಮಂಗಲದಲ್ಲಿ ಹಿಂದೂ ಮುಸ್ಲಿಂ ಗಲಾಟೆ ಸೃಷ್ಟಿಸಿದ್ದೇ ಕಾಂಗ್ರೆಸ್ ಎಂದು ಕೇಂದ್ರ ಸಚಿವ, ಸ್ಥಳೀಯ ಸಂಸದ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇಂದು ನಾಗಮಂಗಲಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಗಲಭೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದು ನಿಜವಾಗಿಯೂ ಹಿಂದೂ ಮುಸ್ಲಿಂ ನಡುವೆ ನಡೆದ ಗಲಾಟೆಯಲ್ಲ. ರಾಜಕೀಯಕ್ಕಾಗಿ ಕಾಂಗ್ರೆಸ್ ನವರೇ ಪ್ರಾಯೋಜಕತ್ವ ವಹಿಸಿ ಮಾಡಿದ ಗಲಾಟೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.
ಕಂಪ್ಲೇಂಟ್ ಕೊಟ್ಟ ರವಿ ಎಂಬಾತ ರಾತ್ರಿ ಒಂದೂವರೆ ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಇಷ್ಟೆಲ್ಲಾ ಜನರ ಹೆಸರು ಪೊಲೀಸರಿಗೆ ಹೇಳಿದ್ದಾನೆ. ರಾತ್ರಿ ಒಂದೂವರೆ ಗಂಟೆಗೆ ಇಷ್ಟೆಲ್ಲಾ ಜನರ ಹೆಸರು ಇವನಿಗೆ ಹೇಗೆ ಎಂದು ಗೊತ್ತಾಯಿತು? ಅವನ ಜ್ಞಾಪಕ ಶಕ್ತಿ ಅಷ್ಟಿದೆಯಾ ಎಂದು ವ್ಯಂಗ್ಯ ಮಾಡಿದ್ದಾರೆ. ಎಫ್ ಐಆರ್ ನಲ್ಲಿ ಮೊದಲು ಹಿಂದೂ ಯುವಕರ ಹೆಸರಿದೆ. ಮತ್ತೆ ಕೆಲವು ಮುಸಲ್ಮಾನರ ಹೆಸರನ್ನೂ ಸೇರಿಸಿದ್ದಾರೆ. ಇಷ್ಟೆಲ್ಲಾ ಹೆಸರುಗಳು ಅವನಿಗೆ ನೆನಪಿರುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದು ಆಕಸ್ಮಿಕ ಅಲ್ಲ, ಕಾಂಗ್ರೆಸ್ ಪೂರ್ವ ನಿಯೋಜಿತ ನಾಟಕ ಎಂದಿದ್ದಾರೆ. ಈ ಹಿಂದೆ 1990 ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ರನ್ನು ಅಧಿಕಾರದಿಂದ ಕೆಳಗಿಳಿಸಲು ಕೆಲವು ಕಾಂಗ್ರೆಸ್ ನಾಯಕರೇ ಇಲ್ಲಿ ಇದೇ ರೀತಿಯ ಗಲಾಟೆ ಸೃಷ್ಟಿಸಿದ್ದರು. ಈವತ್ತೂ ಆಗಿದ್ದು ಇದೇ. ಚನ್ನಪಟ್ಟಣ ಎಲೆಕ್ಷನ್ ಬರುತ್ತಿದೆಯಲ್ಲಾ? ಅದಕ್ಕೇ ಈಗ ಈ ಗಲಾಟೆ ಮಾಡಿಸಿದ್ದಾರೆ. ಪೂರ್ವನಿಯೋಜಿತ ಅಲ್ಲ ಅಂದರೆ 10 ನಿಮಿಷದಲ್ಲಿ ಅವರ ಬಳಿಕ ಜಲ್ಲಿ ಕಲ್ಲು, ಪೆಟ್ರೋಲ್ ಬಾಂಬ್, ತಲ್ವಾರ್ ಎಲ್ಲ ಎಲ್ಲಿಂದ ಬಂತು ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.