ಬೆಂಗಳೂರು: ನಾಗಮಂಗಲದಲ್ಲಿ ಕೋಮುಗಲಭೆ ನಡೆದಿರುವುದನ್ನು ಸಣ್ಣ ವಿಚಾರ ಎಂದ ಗೃಹಸಚಿವ ಜಿ ಪರಮೇಶ್ವರ್ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ.
ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದರಿಂದ ಘರ್ಷಣೆಯಾಗಿತ್ತು. ಪರಿಣಾಮ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ ದಾಂಧಲೆ ಮಾಡಲಾಗಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಇದು ಕೋಮುಗಲಭೆಯಲ್ಲ, ಸಣ್ಣ ಗಲಾಟೆಯಷ್ಟೇ ಎಂದಿದ್ದರು.
ಸಚಿವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್, ನಾಗಮಂಗಲದಲ್ಲಾಗಿರುವ ಘಟನೆಯನ್ನು ಗೃಹ ಸಚಿವರು ಸಣ್ಣ ಘಟನೆ ಎಂದಿರುವುದು ಎಷ್ಟರ ಮಟ್ಟಿಗೆ ಸರಿ ?
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹ ಗಲಭೆಗಳು ಹಲವಾರು ಬಾರಿ ನಡೆಯುತ್ತಿದೆ. ಕಲ್ಲು ತೂರಾಟ ಮಾಡಿ, ಗಲಾಟೆ ಮಾಡಿರುವವರನ್ನು ಬಂಧಿಸದೆ, ಹಿಂದೂಗಳನ್ನು ಬಂಧಿಸಿದ್ದಾರೆ. ಈ ಸರ್ಕಾರ ಯಾರನ್ನು ಓಲೈಸುತ್ತಿದೆ ಎಂಬುದು ತಿಳಿಯದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಘಟನೆಯಲ್ಲಿ 50 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವುದಾಗಿ ಗೃಹಸಚಿವರು ಹೇಳಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಇದೊಂದು ಸಣ್ಣ ವಿಚಾರ. ಶಾಂತ ರೀತಿಯಲ್ಲಿ ಪರಿಹರಿಸಬೇಕು ಎಂದು ಗೃಹಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದರು.