ಮಂಡ್ಯ: ಕೋಮು ಸೌಹಾರ್ದ ಕದಡುವ ಕೆಲಸವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ನಮ್ಮ ಜನರಿಗೆ ಶಾಂತಿ ಸೌಹಾರ್ದದಿಂದ ಬದುಕುವ ವಾತಾವರಣ ಕಲ್ಪಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ನಾಗಮಂಗಲ ಪಟ್ಟಣದಲ್ಲಿ ನಡೆದ ಕೋಮು ಗಲಭೆ ನಡೆದ ಸ್ಥಳಕ್ಕೆ ಅವರು ಇಂದು ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರತ್ಯಕ್ಷದರ್ಶಿಗಳು, ಅಂಗಡಿ, ಗ್ಯಾರೇಜ್‌ಗಳ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸಲಾಗುವುದು. ಈ ಘಟನೆ ನಡೆದಿರುವುದು ದುರದೃಷ್ಟಕರ. ಆಕಸ್ಮಿಕವಾಗಿ ನಡೆದ ಘಟನೆ, ನಂತರ ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಘಟನೆಯಲ್ಲಿ ಹಾನಿಗೊಳಗಾದ ಅಂಗಡಿಗಳು ಹಾಗೂ ಮನೆಗಳ ನಷ್ಟವನ್ನು ಅಂದಾಜಿಸಲಾಗುತ್ತಿದೆ. ಅವುಗಳ ಮಾಲೀಕರಿಗೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು. ಇದು ನನ್ನ ಸ್ವ ಕ್ಷೇತ್ರ, ನಷ್ಟ ಅನುಭವಿಸಿದವರಿಗೆ ವೈಯಕ್ತಿಕವಾಗಿಯೂ ಪರಿಹಾರ ಒದಗಿಸುವುದಾಗಿ ಕೃಷಿ ಸಚಿವರು ತಿಳಿಸಿದರು.
ಮುಂದಿನ ಎರಡು ದಿನಗಳಲ್ಲಿ ಮಂಡ್ಯ ಜಿಲ್ಲಾಧಿಕಾರಿ, ಹಾಗೂ ಎಸ್.ಪಿ. ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲು ಸೂಚನೆ ನೀಡಲಾಗಿದೆ.