Select Your Language

Notifications

webdunia
webdunia
webdunia
webdunia

ತಿರುಪತಿ ತಿಮ್ಮಪ್ಪನ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವುದರ ಹಿಂದಿನ ಅಸಲಿ ಕತೆ ಇಲ್ಲಿದೆ ನೋಡಿ

Tirupati laddu

Krishnaveni K

ಹೈದರಾಬಾದ್ , ಶುಕ್ರವಾರ, 20 ಸೆಪ್ಟಂಬರ್ 2024 (09:43 IST)
ಹೈದರಾಬಾದ್: ಕಲಿಯುಗದಲ್ಲೂ ಭಕ್ತರ ಇಷ್ಟಾರ್ಥ ನೆರವೇರಿಸುವ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಸಿಗುವ ಲಡ್ಡು ಪ್ರಸಾದ ವಿಶ್ವ ವಿಖ್ಯಾತವಾದದ್ದು. ಇದರ ಪರಿಮಳ, ರುಚಿ ಬೇರೆ ಯಾವ ಲಡ್ಡಿನಲ್ಲೂ ಸಿಗದು. ಆದರೆ ಆ ಲಡ್ಡಿನಲ್ಲೂ ಪ್ರಾಣಿಗಳ ಕೊಬ್ಬು ಬಳಕೆಯಾಗುತ್ತಿತ್ತು ಎಂಬ ಬೆಚ್ಚಿಬೀಳಿಸುವ ಅಂಶ ಈಗ ಹೊರಬಿದ್ದಿದೆ.

ಸ್ವತಃ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹಿಂದಿನ ಜಗನ್ ಸರ್ಕಾರದ ಆಡಳಿತಾವಧಿಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಈಗ ಕಣ್ಣಿಗೊತ್ತಿಕೊಂಡು ತಿನ್ನುತ್ತಿದ್ದ ತಿರುಪತಿ ಲಡ್ಡು ಸೇವಿಸಲೂ ಹಿಂದೆ ಮುಂದೆ ನೋಡುವ ಪರಿಸ್ಥಿತಿಯಾಗಿದೆ.

ಜಗನ್ ಸರ್ಕಾರದ ಅವಧಿಯಲ್ಲಿ ಗುಣಮಟ್ಟ ಕಳಪೆಯಾಗಿತ್ತು
ಹಿಂದಿನ ವೈಎಸ್ ಆರ್ ಕಾಂಗ್ರೆಸ್ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡಿಗೆ ಬಳಕೆಯಾಗುತ್ತಿದ್ದ ದ್ರಾಕ್ಷಿ, ಗೋಡಂಬಿ ಪ್ರಮಾಣ ಕಡಿಮೆಯಾಗಿ ಲಡ್ಡಿನ ರುಚಿ ಮೊದಲಿನಂತಿಲ್ಲ ಎಂದು ಅನೇಕ ಭಕ್ತರಿಂದಲೇ ಆರೋಪ ಕೇಳಿಬರುತ್ತಿತ್ತು. ಹಿಂದೆ ಕರ್ನಾಟಕದ ನಂದಿನಿ ತುಪ್ಪವನ್ನು ತಿರುಪತಿ ಲಡ್ಡಿಗೆ ಬಳಕೆ ಮಾಡಲಾಗುತ್ತಿತ್ತು. ಆದರೆ ಬಳಿಕ ಕಮಿಷನ್ ಆಸೆಯಿಂದ ಹಿಂದಿನ ಸರ್ಕಾರಗಳು ನಂದಿನಿ ಉತ್ಪನ್ನವನ್ನು ನಿಲ್ಲಿಸಿತು. ಬಳಿಕ ಬೇರೆ ಕಂಪನಿಗಳೊಂದಿಗೆ ಕಡಿಮೆ ಬೆಲೆಗೆ ತುಪ್ಪ ಒದಗಿಸುವ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಹಿಂದಿನ ಆಡಳಿತಾಧಿಕಾರಿ ಧರ್ಮ ರೆಡ್ಡಿ ತಮಗೆ ತೋಚಿದವರಿಗೆ ತುಪ್ಪ ಒದಗಿಸಲು ಗುತ್ತಿಗೆ ನೀಡಿದರು. ಶುದ್ಧ ಹಸುವಿನ ತಪ್ಪಕ್ಕೆ ಒಂದು ಕೆ.ಜಿಗೆ 400 ರೂ.ಗಳಿಂದ 1,000 ರೂ.ವರೆಗಿದೆ. ಆದರೆ ಕೆಲವು ಕಂಪನಿಗಳು 320 ರೂ.ಗೆ ತುಪ್ಪ ಒದಗಿಸಲು ಒಪ್ಪಿಕೊಂಡವು. ಆದರೆ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಆಸೆಗೆ ಅಂತಹ ಕಂಪನಿಗಳ ಹಿನ್ನಲೆಯನ್ನೂ ಗಮನಿಸದೇ ಗುತ್ತಿಗೆ ನೀಡಲಾಯಿತು. ಪ್ರತಿದಿನ ಲಡ್ಡು ತಯಾರಿಕೆಗೆ ತಿರುಪತಿ ದೇವಾಲಯಕ್ಕೆ 15 ಕೆ.ಜಿ. ತುಪ್ಪ ಬೇಕಾಗುತ್ತದೆ.

ಜುಲೈ 8 ರಂದು ಈ ತುಪ್ಪದ ಗುಣಮಟ್ಟ ಪರೀಕ್ಷೆಗೆ ಲ್ಯಾಬ್ ಕಳುಹಿಸಲಾಯಿತು. ಎನ್ ಡಿಡಿಬಿ ಕೋ. ಲ್ಯಾಬ್ ಆಧುನಿಕ ತಂತ್ರಜ್ಞಾನ ಬಳಸಿ ತುಪ್ಪದ ಗುಣಮಟ್ಟ ಪರೀಕ್ಷೆ ನಡೆಸಿತು. ಈ ಲ್ಯಾಬ್ ಡೈರಿ ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ಮಾಡುವುದರಲ್ಲಿ ಅನುಭವಿ ಸಂಸ್ಥೆಯಾಗಿದೆ. ಅದೇ ರೀತಿ ಟಿಟಿಡಿಗೆ ನೀಡಲಾಗುತ್ತಿದ್ದ ತುಪ್ಪದ ಗುಣಮಟ್ಟ ಪರೀಕ್ಷೆ ನಡೆಸಿ ಇದೇ ತಿಂಗಳು 16 ಕ್ಕೆ ವರದಿ ಸಲ್ಲಿಸಿತು.

ದನದ ಕೊಬ್ಬು, ಪಾಮ್ ಆಯಿಲ್ ಬಳಕೆ ದೃಢ
ಟಿಟಿಡಿಗೆ ನೀಡಲಾಗುತ್ತಿದ್ದ ತುಪ್ಪದಲ್ಲಿ ದನದ ಕೊಬ್ಬು, ಪಾಮ್ ಆಯಿಲ್, ಸೋಯಾಬಿನ್, ಸನ್ ಫ್ಲವರ್ ಎಣ್ಣೆ, ಮೀನಿನ ಎಣ್ಣೆ ಇತ್ಯಾದಿ ಕಲಬೆರಕೆಯಾಗಿರುವುದು ಸ್ಪಷ್ಟವಾಗಿದೆ. ಹಿಂದಿನ ಸರ್ಕಾರ ಈ ತುಪ್ಪದ ಗುಣಮಟ್ಟವನ್ನೂ ಪರೀಕ್ಷಿಸದೇ ತಿರುಪತಿ ಲಡ್ಡಿಗೆ ಬಳಕೆ ಮಾಡಿತ್ತು. ಆಂಧ್ರಪ್ರದೇಶದಲ್ಲಿ ಎನ್ ಡಿಎ ಸರ್ಕಾರ ಬಂದ ಮೇಲೆ ತಿರುಪತಿ ತಿಮ್ಮಪ್ಪನ ಲಡ್ಡಿಗೆ ಬಳಸುತ್ತಿದ್ದ ತುಪ್ಪ ಪರೀಕ್ಷೆಗೊಳಪಡಿಸಲಾಯಿತು.

ಗುಣಮಟ್ಟ ಸುಧಾರಣೆಗೆ ತಜ್ಞರ ಸಮಿತಿ
ಇಂತಹದ್ದೊಂದು ವರದಿ ಬಂದ ಬೆನ್ನಲ್ಲೇ ಈಗ ಸರ್ಕಾರ ತಜ್ಞರ ಸಮಿತಿ ನೇಮಿಸಿದ್ದು, ಗುಣಮಟ್ಟದ ತುಪ್ಪ ಹೇಗಿರಬೇಕು, ಯಾವ ಮಾನದಂಡಗಳನ್ನು ಹೊಂದಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ ಇಷ್ಟು ದಿನ ಕಳಪೆ ತುಪ್ಪ ಖರೀದಿ ಮಾಡಲು ಕಾರಣವೇನು ಎಂಬ ಅಂಶವನ್ನೂ ಬಯಲಿಗೆಳೆಯಲಿದೆ.

ಈ ಸಮಿತಿಯಲ್ಲಿ ಬೆಂಗಳೂರಿನ ಎನ್ ಡಿಆರ್ ಐ ಡೈರಿ ಎಕ್ಸ್ ಪರ್ಟ್ ಡಾ. ಡಿ ಸುರೇಂದ್ರನಾಥ್, ಹೈದರಾಬಾದ್ ನ ವಿಜಯಭಾಸ್ಕರ್ ರೆಡ್ಡಿ, ಬೆಂಗಳೂರು ಐಐಯುಎಂನ ಪ್ರೊ. ಬಿ ಮಾಧವನ್, ತೆಲಂಗಾಣ ಪಶು ವೈದ್ಯಕೀಯ ವಿವಿಯ ಪ್ರೊ. ಡಾ. ಸ್ವರ್ಣಲತಾ ಇದ್ದಾರೆ.

webdunia
ಕರ್ನಾಟಕದಲ್ಲಿ ನಂದಿನಿ ತುಪ್ಪ ಗಲಾಟೆ ಹಿಂದಿದೆ ತಿರುಪತಿ ಅಕ್ರಮದ ನಂಟು
ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ತಿರುಪತಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸಿರುವುದರ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟ ಮಾಡಿಕೊಂಡಿತ್ತು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ತಿರುಪತಿ ದೇವಾಲಯಕ್ಕೆ ತುಪ್ಪ ಸರಬರಾಜು ನಿಲ್ಲಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದರೆ ಇದು ಬಿಜೆಪಿ ಅವಧಿಯಲ್ಲೇ ಆಗಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿತ್ತು. ಇದರ ನಡುವೆ ಕೆಎಂಎಫ್ ನಿಜ ಸಂಗತಿ ಬಯಲು ಮಾಡಿತ್ತು. ಸ್ವತಃ ಟಿಟಿಡಿಯೇ ನಂದಿನಿ ತುಪ್ಪದ ಬೆಲೆ ಹೆಚ್ಚಳವಾಗಿರುವುದರಿಂದ ನಮಗೆ ಬೇಡ ಎಂದು ಗುತ್ತಿಗೆ ರದ್ದು ಮಾಡಿತ್ತು. ಬೇರೆ ಕಡೆ ಕಡಿಮೆ ಬೆಲೆಗೆ ತುಪ್ಪ ಖರೀದಿಗೆ ಮುಂದಾಗಿದೆ ಎಂಬ ವಿಚಾರ ಹೇಳಿತ್ತು. ಇದೀಗ ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪದ ಮಾಹಿತಿ ಹೊರಬೀಳುತ್ತಿದ್ದಂತೇ ಅಂದು ಟಿಟಿಡಿ ಯಾಕೆ ನಂದಿನಿ ತುಪ್ಪ ಖರೀದಿ ನಿಲ್ಲಿಸಿತ್ತು ಎಂಬುದು ಸ್ಪಷ್ಟವಾಗಿದೆ. ನಂದಿನಿ ತುಪ್ಪದ ಬೆಲೆ ಹೆಚ್ಚಳವಾಗಿರುವುದರಿಂದ ಇಂತಹ ಕಲಬೆರಕೆ ತುಪ್ಪವನ್ನು ಲಡ್ಡು ಪ್ರಸಾದ ಮಾಡಲು ಟಿಟಿಡಿ ಖರೀದಿ ಮಾಡುತ್ತಿತ್ತು ಎಂಬುದು ಈಗ ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ: ಹಣದ ವಿಚಾರಕ್ಕೆ ಲೈಂಗಿಕ ಕಾರ್ಯಕರ್ತೆಯನ್ನೇ ಕೊಂದ ಗ್ರಾಹಕ