ಚನ್ನಪಟ್ಟಣದಲ್ಲಿ ಯಾರು ಗೆಲ್ತಾರೆ: ಬೆಟ್ಟಿಂಗ್ ಶುರು
ಬೆಂಗಳೂರು , ಮಂಗಳವಾರ, 19 ನವೆಂಬರ್ 2024 (09:38 IST)
ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆ ಪೈಕಿ ಚನ್ನಪಟ್ಟಣದ ಫಲಿತಾಂಶದ ಮೇಲೆ ಇಡೀ ರಾಜ್ಯದ ಜನರು ಕುತೂಹಲದ ಕಣ್ಣಿಟ್ಟಿದ್ದಾರೆ. ಇದೀಗ ಇಲ್ಲಿ ಯಾರು ಗೆಲ್ಲುತ್ತಾರೆ ಎಂಬ ವಿಚಾರಕ್ಕೆ ಬೆಟ್ಟಿಂಗ್ ಶುರುವಾಗಿದೆ.
ಚನ್ನಪಟ್ಟಣದಲ್ಲಿ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಿಂದ ಬಿಜೆಪಿ ತೊರೆದು ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸೇರಿದ್ದ ಸಿಪಿ ಯೋಗೇಶ್ವರ್ ಕಣಕ್ಕಿಳಿದಿದ್ದರು. ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಸಿಪಿ ಯೋಗೇಶ್ವರ್ ಗೆ ಅವರ ಪಕ್ಷದವರ ಹೇಳಿಕೆಗಳೇ ಮುಳ್ಳಾಗುವ ಲಕ್ಷಣಗಳು ಕಾಣುತ್ತಿವೆ.
ಇತ್ತೀಚೆಗೆ ಜಮೀರ್ ಅಹ್ಮದ್ ಕರಿಯಾ ಎಂದು ಕುಮಾರಸ್ವಾಮಿಯನ್ನು ಕರೆದಿದ್ದು, ಒಕ್ಕಲಿಗರ ಮತಕ್ಕೆ ಕುತ್ತು ತರುವ ಲಕ್ಷಣವಿದೆ. ಹೀಗಾಗಿ ಸಿಪಿ ಯೋಗೇಶ್ವರ್ ಗೆ ಸೋಲಿನ ಭಯ ಶುರುವಾಗಿದೆ. ಇತ್ತ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಎರಡು ಚುನಾವಣೆ ಸೋತು ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹೀಗಾಗಿ ಅವರಿಗೂ ಇದು ಮಹತ್ವದ ಚುನಾವಣೆ.
ಈ ನಿಟ್ಟಿನಲ್ಲಿ ಈ ಚುನಾವಣೆ ಫಲಿತಾಂಶದ ಮೇಲೆ ಎಲ್ಲರ ಕುತೂಹಲವಿದೆ. ಇದೀಗ ಚನ್ನಪಟ್ಟಣ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ಕೂಡಾ ಶುರುವಾಗಿದೆ ಎಂಬ ಮಾಹಿತಿಯಿದೆ. ನಿಖಿಲ್ ಪರವಾಗಿ ಹೆಚ್ಚು ಜನ ಬೆಟ್ಟಿಂಗ್ ನಡೆಸುತ್ತಿದ್ದಾರೆ. ಬೆಟ್ಟಿಂಗ್ ಮಾಡುವವರಿಗೆ ಈ ಬಾರಿ ಅವರೇ ಫೇವರಿಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಮುಂದಿನ ಸುದ್ದಿ