ಬೆಂಗಳೂರು: ಮನೆಗೆ ಶಾಮಿಯಾನ ಹಾಕಲು ಬಂದಿದ್ದ ಇಬ್ಬರು ತನ್ನ ಮೇಲೆ ಕೊಲೆಗೆ ಯತ್ನಿಸಿದ್ದು, ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಸಚಿವ ಕೆಎನ್ ರಾಜಣ್ಣ ಪುತ್ರ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ ದೂರು ನೀಡಿದ್ದಾರೆ.
ಈ ಸಂಬಂಧ ವಿಪಕ್ಷ ನಾಯಕ ಆರ್ ಅಶೋಕ್ ಎಕ್ಸ್‌ನಲ್ಲಿ ಬರೆದುಕೊಂಡು, ಹನಿಟ್ರ್ಯಾಪ್ ಆಯ್ತು, ಈಗ ಕೊಲೆ ಸುಪಾರಿ ನೀಡಲಾಗಿದೆ ಎಂದು ತಮ್ಮದೇ ಪಕ್ಷದ ನಾಯಕ ಆರೋಪ ಮಾಡುತ್ತಿದ್ದಾರೆ. ಇದರ ಖಳನಾಯಕ ಯಾರೆಂಬುದು ಜನರಿಗೆ ಗೊತ್ತಾಗಲಿ ಎಂದು ಹೇಳಿದ್ದಾರೆ.
ಹನಿಟ್ರ್ಯಾಪ್ ಆಯ್ತು ಈಗ ಕೊಲೆ ಸುಪಾರಿ!
ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಸದನದಲ್ಲಿ ತಮ್ಮ ಸಹಾಯಕತೆ ತೋಡಿಕೊಂಡು ತನಿಖೆಗೆ ಮನವಿ ಮಾಡಿದ್ದ ಬೆನ್ನಲ್ಲೇ ಈಗ ಅವರ ಸುಪುತ್ರ, ವಿಧಾನ ಪರಿಷತ್ ಸದಸ್ಯ ಶ್ರೀ ರಾಜೇಂದ್ರ ರಾಜಣ್ಣ ಅವರು ತಮ್ಮ ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮ್ಮ ನಾಲಾಯಕ್ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು, ಶಾಸಕರು, ಅವರ ಕುಟುಂಬ ಸದಸ್ಯರಿಗೆ ರಕ್ಷಣೆ ಇಲ್ಲದ ಮೇಲೆ ಇನ್ನು ಜನಸಾಮಾನ್ಯರ ಗತಿ ಏನು?
ಹಿರಿಯ ಸಚಿವರನ್ನ ಬೆದರಿಸಿ, ಬ್ಲಾಕ್ ಮೇಲ್ ಮಾಡಿ, ಅವರ ಬಾಯಿ ಮುಚ್ಚಿಸುವ ಉದ್ದೇಶದಿಂದ ಇವೆಲ್ಲ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಲಿ, ಅಧಿಕಾರಕ್ಕಾಗಿ ಕರ್ನಾಟಕದ ರಾಜಕಾರಣವನ್ನ ಇಷ್ಟು ಕೀಳು ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಆ ಖಳನಾಯಕ ಯಾರು ಎನ್ನುವುದು ಜನರಿಗೆ ಗೊತ್ತಾಗಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.