Select Your Language

Notifications

webdunia
webdunia
webdunia
webdunia

ಹನಿಟ್ರ್ಯಾಪ್ ಕುರಿತು ನ್ಯಾಯಮೂರ್ತಿ ಅಥವಾ ಸಿಬಿಐ ತನಿಖೆಗೆ ವಿಜಯೇಂದ್ರ ಆಗ್ರಹ

Honey trap Case, BJP President BY Vijayendra, DCM DK Shivkumar

Sampriya

ಬೆಂಗಳೂರು , ಶುಕ್ರವಾರ, 21 ಮಾರ್ಚ್ 2025 (18:33 IST)
ಬೆಂಗಳೂರು: ಹನಿಟ್ರ್ಯಾಪ್ ಕುರಿತಂತೆ ಹೈಕೋರ್ಟಿನ ಈಗಿನ ನ್ಯಾಯಮೂರ್ತಿಗಳು ಅಥವಾ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಸಚಿವರಾದ ರಾಜಣ್ಣ ಅವರು ರಾಜ್ಯ ಹಾಗೂ ದೇಶದ 48ಕ್ಕೂ ಹೆಚ್ಚು ಪ್ರಮುಖರು ಹನಿಟ್ರ್ಯಾಪ್‍ಗೆ ಒಳಗಾದ ಕುರಿತು ತಿಳಿಸಿ ತನಿಖೆ ಆಗಬೇಕೆಂದು ಹೇಳಿಕೆ ಕೊಟ್ಟಿದ್ದಾರೆ. ಇದು ಬಹಳ ಗಂಭೀರ ವಿಚಾರ ಎಂದು ತಿಳಿಸಿದ ಗೃಹ ಸಚಿವರು, ಇದರ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದ್ದರು. ಸದನ ಮುಗಿದ ಬಳಿಕ ಹೊರಕ್ಕೆ ಬಂದ ಗೃಹ ಸಚಿವರು, ತಮಗೆ ಅಧಿಕೃತವಾಗಿ ಯಾವುದೇ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದಿದ್ದಾರೆ ಎಂದು ವಿವರಿಸಿದರು.

ಅಧಿಕಾರಿಗಳು ಮಾಹಿತಿ ಕೊಟ್ಟ ಮೇಲೆ ಅದರ ಕುರಿತು ಆಲೋಚಿಸುವುದಾಗಿ ತಿಳಿಸಿ ದ್ವಂದ್ವ ನೀತಿ ಪ್ರದರ್ಶನ ಮಾಡಿದ್ದಾರೆ. ನಾವು ಸದನದಲ್ಲಿ ಮುಖ್ಯಮಂತ್ರಿಗಳಿಂದ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದೇವೆ. ಅವರು ಯಾವುದೇ ರೀತಿ ಸರಿಯಾದ ಉತ್ತರ ಕೊಟ್ಟಿಲ್ಲ ಎಂದು ಟೀಕಿಸಿದರು. ಇದೊಂದು ಗಂಭೀರ ಪ್ರಕರಣ. ಇದು ಸದನದ 224 ಶಾಸಕರ, ರಾಜ್ಯದ ಗೌರವದ ಪ್ರಶ್ನೆ. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಕಾಮಗಾರಿಗಳಲ್ಲಿ ಶೇ 4 ಮೀಸಲಾತಿ ನೀಡಿದ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ. ಇದರ ವಿರುದ್ಧ ನಾವು ರಾಜ್ಯಾದ್ಯಂತ ಜನಾಂದೋಲನಕ್ಕೆ ಕರೆ ಕೊಡಲಿದ್ದೇವೆ ಎಂದು ಪ್ರಕಟಿಸಿದರು. ಬಿಜೆಪಿ- ಜೆಡಿಎಸ್ ಪಕ್ಷಗಳು ಮುಸಲ್ಮಾನರ ವಿರೋಧಿ ಅಲ್ಲ; ಆದರೆ, ಹಿಂದೂಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಹಣಕಾಸಿನ ಸಚಿವರಾದ ಮುಖ್ಯಮಂತ್ರಿಗಳು ನಡೆದುಕೊಳ್ಳುತ್ತಿದ್ದಾರೆ. ಇದನ್ನು ನಾವು ಧಿಕ್ಕರಿಸುತ್ತಿದ್ದೇವೆ ಎಂದು ತಿಳಿಸಿದರು.

ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸಲ್ಮಾನರಿಗೆ ಕೊಡುವ ಮೊತ್ತವನ್ನು 20 ಲಕ್ಷದಿಂದ 30 ಲಕ್ಷಕ್ಕೆ ಏರಿಸಿದ್ದಾರೆ. ಹಿಂದೂಗಳಲ್ಲಿ ಬಡವರಿಲ್ಲವೇ? ಅವರು ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋದರೆ ಅವರಿಗೆ ಹಣಕಾಸಿನ ಅವಶ್ಯಕತೆ ಇಲ್ಲವೇ? ಎಂದು ಕೇಳಿದರು. ಮುಸಲ್ಮಾನ ಹೆಣ್ಮಕ್ಕಳ ಆತ್ಮರಕ್ಷಣೆಗಾಗಿ ಬಜೆಟ್‍ನಲ್ಲಿ ಹಣ ಇಟ್ಟಿದ್ದಾರೆ. ರಾಜ್ಯದಲ್ಲಿ ಲವ್ ಜಿಹಾದ್‍ಗೆ ಬಲಿ ಆಗುತ್ತಿರುವುದು ಹಿಂದೂ ಹೆಣ್ಮಕ್ಕಳೇ ಹೊರತು ಮುಸ್ಲಿಂ ಹೆಣ್ಮಕ್ಕಳಲ್ಲ ಎಂದು ಗಮನ ಸೆಳೆದರು.

ಮುಸಲ್ಮಾನರ ಓಲೈಕೆ ಮೂಲಕ ಧರ್ಮಗಳ ನಡುವೆ ಬೆಂಕಿ ಹಚ್ಚಲು ಮುಖ್ಯಮಂತ್ರಿಗಳು ಹೊರಟಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟು ಬಿಜೆಪಿ- ಜೆಡಿಎಸ್ ರಾಜ್ಯವ್ಯಾಪಿ ಹೋರಾಟ ಮಾಡಲಿದೆ. ಓಲೈಕೆ ರಾಜಕಾರಣಕ್ಕೆ ಇತಿಶ್ರೀ ಹಾಕಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ಸಿನವರು ಹನಿಟ್ರ್ಯಾಪ್ ಮುಚ್ಚಿ ಹಾಕದಿರಲಿ- ಅಶೋಕ್
ವಿಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಹನಿಟ್ರ್ಯಾಪ್ ವಿಚಾರದಲ್ಲಿ ನ್ಯಾಯಾಧೀಶರು, ಕೇಂದ್ರದ ನಾಯಕರ, ಸಚಿವರ ಹೆಸರು ತಂದಿದ್ದಾರೆ. ಇದರ ಜುಡಿಷಿಯಲ್ ತನಿಖೆ ಅಥವಾ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಕೇಂದ್ರದ ನಾಯಕರ ಫೋನ್ ಬಂತೆಂದು ಇದನ್ನು ಮುಚ್ಚಿ ಹಾಕುವ ಕೆಲಸವನ್ನು ಕಾಂಗ್ರೆಸ್ಸಿನವರು ಮಾಡಬಾರದು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ತಾವು ಮುಸ್ಲಿಮರಿಗೆ ಶೇ 4 ಮೀಸಲಾತಿ ಪರ ಇರುವುದಾಗಿ, ಹಲಾಲ್ ಬಜೆಟ್ ಪರ ಇದ್ದೇನೆ ಎಂಬುದಾಗಿ ಹಾಗೂ ಮುಸ್ಲಿಮರಿಗೆ ರಾಜ್ಯವನ್ನೇ ಮಾರಿ ಬಿಡುತ್ತೇನೆ ಎಂದಿದ್ದಾರೆ. ಟೋಪಿ ಹಾಕಿಲ್ಲ ಎಂಬುದು ಬಿಟ್ಟರೆ ಸಿದ್ದರಾಮಯ್ಯನವರು ಮುಸಲ್ಮಾನರ ಬಜೆಟ್ ಮಂಡಿಸಿದ್ದಾರೆ ಎಂದು ಟೀಕಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ವಿದೇಶಿ ಪ್ರವಾಸಕ್ಕೆ ಮಾಡಿದ ಖರ್ಚು ಅಷ್ಟೊಂದಾ