Publish Date: Sun, 05 Jul 2026 (15:15 IST)
Updated Date: Sun, 05 Jul 2026 (15:19 IST)
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಬಸ್ಸೊಂದು ಮುಂಭಾಗದ ಹೆಡ್‌ಲೈಟ್‌ಗಳಿಲ್ಲದೆ, ಕೇವಲ ನಿರ್ವಾಹಕನ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ರಾತ್ರಿಯ ಕತ್ತಲಲ್ಲಿ ಸಂಚರಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಕಲಬುರಗಿ-ಚಿಂಚೋಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎ-28 ಎಫ್-1985 ನೋಂದಣಿ ಸಂಖ್ಯೆಯ ಈ ಬಸ್ಸಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರಿಗೆ ಸಂಸ್ಥೆಯ ದುಸ್ಥಿತಿಯನ್ನು ಬಿಚ್ಚಿಟ್ಟಿದೆ.
ನಿರ್ವಾಹಕ ಮೊಬೈಲ್ ನಲ್ಲಿ ಟಾರ್ಚ್ ಆನ್ ಮಾಡಿ ಹಿಡಿದಿದ್ದರೆ ಡ್ರೈವರ್ ಆ ಬೆಳಕನ್ನೇ ನಂಬಿ ಬಸ್ ಚಲಾಯಿಸಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ನಂಬಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಆದರೆ ಮೂಲಭೂತ ಸೌಕರ್ಯಗಳೇ ಇಲ್ಲದ ಇಂತಹ ವಾಹನಗಳನ್ನು ರಸ್ತೆಗಿಳಿಸುವುದು ಪ್ರಯಾಣಿಕರ ಮತ್ತು ಇತರ ವಾಹನ ಸವಾರರ ಜೀವಕ್ಕೆ ನೇರ ಕುತ್ತು ತರುವಂತಹದ್ದಾಗಿದೆ.
ಹತ್ತಾರು ಪ್ರಯಾಣಿಕರಿರುವ ಬೃಹತ್ ವಾಹನವನ್ನು ಹೆಡ್‌ಲೈಟ್ ಇಲ್ಲದೆ ಕೇವಲ ಮೊಬೈಲ್ ಫ್ಲ್ಯಾಶ್‌ಲೈಟ್ ನಂಬಿ ಹೆದ್ದಾರಿಯಲ್ಲಿ ಚಲಾಯಿಸುವುದು ಅತ್ಯಂತ ಅಪಾಯಕಾರಿ. ಕತ್ತಲಲ್ಲಿ ರಸ್ತೆಯ ತಿರುವುಗಳು, ಗುಂಡಿಗಳು ಅಥವಾ ಎದುರಿನಿಂದ ಬರುವ ವಾಹನಗಳು ಸರಿಯಾಗಿ ಕಾಣಿಸುವುದಿಲ್ಲ. ಚಾಲಕ ಮತ್ತು ನಿರ್ವಾಹಕ ಅನಿವಾರ್ಯತೆಯಿಂದ ಅಥವಾ ಕರ್ತವ್ಯದ ಒತ್ತಡದಿಂದ ಈ ಸಾಹಸಕ್ಕೆ ಕೈ ಹಾಕಿದ್ದರೂ, ಇದು ಯಾವುದೇ ಕ್ಷಣದಲ್ಲೂ ದೊಡ್ಡ ದುರಂತಕ್ಕೆ ಕಾರಣವಾಗಬಹುದಿತ್ತು.
ಯಾವುದೇ ಬಸ್ ಡಿಪೋದಿಂದ ಹೊರಡುವ ಮುನ್ನ ಅದರ ಬ್ರೇಕ್, ಇಂಡಿಕೇಟರ್ ಮತ್ತು ಹೆಡ್‌ಲೈಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುವುದು ಕಡ್ಡಾಯ. ಇಂತಹ ಕನಿಷ್ಠ ತಪಾಸಣೆಯೂ ಇಲ್ಲದೆ ಬಸ್ಸನ್ನು 90 ಕಿಲೋಮೀಟರ್‌ಗೂ ಹೆಚ್ಚು ದೂರದ ಮಾರ್ಗಕ್ಕೆ ಕಳುಹಿಸಿರುವುದು ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಮತ್ತು ತಾಂತ್ರಿಕ ವಿಭಾಗದ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ