Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡ ಪ್ರಮುಖ ನಾಯಕರು

Karnataka BJP
ಬೆಂಗಳೂರು: ಬೇರೆ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾದ ಮುಖಂಡರಿಗೆ ಉತ್ತಮ ಸ್ಥಾನ ನೀಡಿ ಗೌರವಿಸಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. 

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಬೆಳಗಾವಿಯ ರಾಯಭಾಗ ವಿಧಾನಸಭಾ ಕ್ಷೇತ್ರದ ಮುಖಂಡ ಹಾಗೂ ಕೆಎಂಎಫ್‍ನ ಮಾಜಿ ನಿರ್ದೇಶಕ ಸದಾಶಿವ ವಸಂತ ದೇಶಿಂಗೆ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು, ರಾಯಣ್ಣ ಗೋಗ್ರೀನ್ ಫೌಂಡೇಷನ್‍ನ ಅಧ್ಯಕ್ಷರೂ ಆದ ದೇಶಿಂಗೆ ಅವರು, ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವವರು. ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರ ಸೇರ್ಪಡೆಯಿಂದ ಉತ್ತರ ಕರ್ನಾಟಕ ಭಾಗಕ್ಕೆ ವಿಶೇಷವಾಗಿ ಕಿತ್ತೂರು ಕರ್ನಾಟಕ ಭಾಗಕ್ಕೆ ಆನೆ ಬಲ ಬಂದಂತಾಗಿದೆ ಎಂದರು. 

ರಾಜ್ಯದಲ್ಲಿ ಪ್ರಾಮಾಣಿಕತೆಗೆ ಹಾಗೂ ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಹಾಲುಮತ ಸಮಾಜ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ ಕನಕದಾಸರ ಜಯಂತಿಗೆ ರಜೆ ಘೋಷಣೆ ಮಾಡಿದರು. ಕಾಗಿನೆಲೆ ಪೀಠಕ್ಕೆ ಅನುದಾನ ನೀಡಿದರು. ಕುರಿಗಾರರ ರಕ್ಷಣೆಗೆ ಸಹಕಾರ ನೀಡಿದ್ದರು ಎಂದರು. ಯಾವುದೇ ಸಮಾಜ ಒಗ್ಗಟ್ಟಾಗಿ ಇದ್ದರೆ ನ್ಯಾಯ ಸಿಗಲಿದೆ. ಈ ನಿಟ್ಟಿನಲ್ಲಿ ಹಾಲುಮತ ಸಮಾಜಕ್ಕೆ ಎಲ್ಲ ರೀತಿಯ ನೆರವು, ಸಹಕಾರವನ್ನು ಬಿಜೆಪಿ ನೀಡುತ್ತಾ  ಬರುತ್ತಿದೆ. ಬಿಜೆಪಿ ಹಾಲುಮತ ಸಮಾಜಕ್ಕೆ ಎಂದೂ ಅನ್ಯಾಯ ಮಾಡಿಲ್ಲ ಎಂದರು.
 
ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ಯಡಿಯೂರಪ್ಪ ಅವರು ಸಿಎಂ ಆಗಬೇಕು ಎಂದು ಬಯಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ರಾಜೀನಾಮೆ ನೀಡಿ ಬಿಜೆಪಿಗೆ ಬಂದರು. ಬೈರತಿ ಬಸವರಾಜು, ಎಂ.ಟಿ.ಬಿ. ನಾಗರಾಜು ಅವರು ಬಿಜೆಪಿಗೆ ಸೇರ್ಪಡೆಯಾದರು. ಮಂತ್ರಿಯಾಗಿದ್ದರೂ ತ್ಯಾಗ ಮಾಡಿ ನಮ್ಮ ಪಕ್ಷಕ್ಕೆ ಬಂದಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಸಿ.ಎಚ್.ವಿಜಯಶಂಕರ್ ಅವರನ್ನು ಎಂಎಲ್‍ಸಿ ಮಾಡಿ ಸಚಿವಸ್ಥಾನ ನೀಡಿದ್ದು ಯಡಿಯೂರಪ್ಪ ಅವರು. ಇತ್ತೀಚೆಗೆ ಪ್ರೊ. ನಾಗರಾಜು ಅವರನ್ನು ರಾಜ್ಯಸಭೆಗೆ ಕಳಿಸಿರುವುದು ಬಿಜೆಪಿ ಎಂದರು. 
 
ಕಾಂಗ್ರೆಸ್ ಪಕ್ಷವು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಇತ್ತೀಚೆಗೆ ಹಾವೇರಿ ಘಟನೆಯ ನಂತರ ಸರ್ಕಾರ ನಡೆಯನ್ನು ನೋಡಿದರೆ ನಾಚಿಕೆಯಾಗಬೇಕು. ನರೇಗಲ್‍ನಲ್ಲಿ ಹಾಲುಮತ ಸಮಾಜಕ್ಕೆ ಸೇರಿದ ಲೋಹಿತ್ ಕುರುಬರ ಹಾಗೂ ಶಿವರಾಮ ಕುರುಬರ ಅವರ ಮೇಲೆ ಹಲ್ಲೆ ಆಯಿತು. ಹೋರಿ ಬೆದರಿಸುವ ವೇಳೆ ಪಟಾಕಿ ಹೊಡೆದರು ಎಂದು ಮನೆಗೆ ನುಗ್ಗಿ ಹಲ್ಲೆ ಮಾಡಿದರು. ಕೈ ಕತ್ತರಿಸಿದರು. ಆದರೂ ರಾಜ್ಯದ ಸಿಎಂ ಆಗಲಿ, ಸಚಿವರಾಗಲಿ ನರೇಗಲ್‍ಗೆ ಹೋಗಲಿಲ್ಲ. ಬಡ ಕುಟುಂಬವನ್ನು ಮಾತನಾಡಿಸಿ ಧೈರ್ಯ ತುಂಬಿಲ್ಲ. ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಇದೆಲ್ಲ ತಿಳಿಯಲ್ಲ ಎಂದು ಆಕ್ಷೇಪಿಸಿದರು. 

ಬಸವರಾಜ ಬೊಮ್ಮಾಯಿ ಸೇರಿದಂತೆ ನಾವೆಲ್ಲ ಹೋಗಿ ಹಲ್ಲೆಗೊಳಗಾದ ಕುಟುಂಬಕ್ಕೆ ಧೈರ್ಯ ಹೇಳಿದೆವು. ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ಬದುಕಿದೆಯಾ ಸತ್ತಿದೆಯಾ ಎಂದು ಮಾತನಾಡುವಂತಾಗಿದೆ ಎಂದು ಹೇಳಿದರು.  ಬೇರೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ; ಹೋಗುತ್ತವೆ. ಆದರೆ ಬಿಜೆಪಿ ಮಾತ್ರ ಎಲ್ಲಾ ಸಮಾಜಕ್ಕೆ ನೀಡಬೇಕಾದ ಸ್ಥಾನಮಾನ ನೀಡುತ್ತಿದೆ ಎಂದರು. 
ನರೇಂದ್ರ ಮೋದಿ ಜೀ ಅವರ ಸರ್ಕಾರದಲ್ಲಿ 27 ಸಂಸದರು ಒಬಿಸಿಗೆ ಸೇರಿದವರು ಸಂಪುಟ ದರ್ಜೆ ಸಚಿವರಾಗಿದ್ದಾರೆ. ಅತಿ ಹೆಚ್ಚು ಹಿಂದುಳಿದ ವರ್ಗದವರಿಗೆ ಅವಕಾಶ ನೀಡಿದೆ. ಸ್ವತಃ ಮೋದಿ ಅವರೇ ಅತ್ಯಂತ ಹಿಂದುಳಿದ ಸಮಾಜವರು. ಅದೇ ಕಾರಣಕ್ಕೆ ಕಾಂಗ್ರೆಸ್ ನವರು ದಾಳಿ ಮಾಡುತ್ತಾರೆ ಎಂದು ಆರೋಪಿಸಿದರು. 
 
 
ಗಾಂಧಿ ಕುಟುಂಬ ಹೊರತುಪಡಿಸಿ ಬೇರೆ ಯಾರೂ ಪ್ರಧಾನಿಯಾಗಬಾರದು ಎಂದು ಕಾಂಗ್ರೆಸ್ ಬಯಸಿದೆ. ಆದರೆ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಭಾರತವನ್ನು ವಿಶ್ವದ ಶಕ್ತಿಯಾಗಿ ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಯಲ್ಲಾಪುರದಲ್ಲಿ ದಲಿತ ಹೆಣ್ಣು ಮಗಳ ಹತ್ಯೆಯಾದರೆ ಒಬ್ಬ ಸಚಿವ ಹೋಗಲಿಲ್ಲ. ನ್ಯಾಯ ಕೊಡಲಿಲ್ಲ. ಪೆÇೀಸ್ಟ್ ಮೂಲಕ ಚೆಕ್ ಕೊಡ್ತಾರೆ. ಕೊಪ್ಪಳದಲ್ಲಿ ಎಸ್ ಟಿಗೆ ಸೇರಿದ ವ್ಯಕ್ತಿಯ ಹತ್ಯೆಯಾದರೂ ಒಬ್ಬ ಸಚಿವರು ಕುಟುಂಬಕ್ಕೆ ಧೈರ್ಯ ಹೇಳಲಿಲ್ಲ. 
 
ಎಲ್ಲೂ ಹಿಂದೂಗಳ ಹತ್ಯೆಯಾಗುತ್ತಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿದೆ. ಲಜ್ಜೆಗೆಟ್ಟ ಸರ್ಕಾರ  ಓಟ್ ಬ್ಯಾಂಕ್ ದುರಾಸೆಯಿಂದ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ದುಷ್ಟ ಮತೀಯ ಶಕ್ತಿಯಾಗಿದೆ ಈ ಸರ್ಕಾರ. ಏನ್ ಮಾಡಿದರೂ ನಡೆಯುತ್ತದೆ ಎಂದು ಸರ್ಕಾರ ಬಯಸಿದೆ. ಆದ್ದರಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಎಲ್ಲಾ ಸಮಾಜ ಒಗ್ಗೂಡಿಸಿ ಸಾಮಾಜಿಕ ನ್ಯಾಯ ಕೊಡಿಸಲು ಬಿಜೆಪಿ ಕೆಲಸ ಮಾಡುತ್ತಿದೆ ಎಂದರು.   

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಹಿಡಿದುಕೊಂಡು ನಿಂತಿದ್ದ ಮಹಿಳೆ ಖಾಸಗಿ ಅಂಗಾಂಗ ಸ್ಪರ್ಶಿಸುತ್ತಿದ್ದ ವ್ಯಕ್ತಿ: ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ Video