ಹಾವೇರಿ: ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದ ಬಳಿಕ ಕಾರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ ವಿಡಿಯೋವೊಂದು ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
2024 ರ ಜನವರಿಯಲ್ಲಿ ಹಾನಗಲ್ ನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಭಾರೀ ಸದ್ದು ಮಾಡಿತ್ತು. ಪ್ರಕರಣದಲ್ಲಿ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ 12 ಆರೋಪಿಗಳಿಗೆ 10 ತಿಂಗಳ ಹಿಂದೆಯೇ ಜಾಮೀನು ಸಿಕ್ಕಿತ್ತು. ಉಳಿದ 7 ಆರೋಪಿಗಳಿಗೆ ಇದುವರೆಗೆ ನ್ಯಾಯಾಲಯ ಜಾಮೀನು ನಿರಾಕರಿಸುತ್ತಲೇ ಬಂದಿತ್ತು.
ಆದರೆ ಈಗ ಸಂತ್ರಸ್ತೆಯ ಹೇಳಿಕೆ ಉಳಿಸಿಕೊಳ್ಳಲು ವಿಫಲವಾದ ಹಿನ್ನಲೆಯಲ್ಲಿ ಆರೋಪಿಗಳಿಗೆ ಮೂರು ದಿನದ ಹಿಂದಷ್ಟೇ ಜಾಮೀನು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಅಪ್ತಾಬ್ ಚಂದನಕಟ್ಟಿ, ಮದರ್ ಸಾಬ್ ಮಂಡಕ್ಕಿ, ಸಮಿವುಲ್ಲಾ ಲಾಲನವರ, ಮಹಮ್ಮದ್ ಸಾದಿಕ್,ಶೊಯಿಬ್ ಮುಲ್ಲಾ, ತೌಸಿಫ್ ಚೋಟಿ, ರಿಯಾಜ್ ಗೆ ಈಗ ಜಾಮೀನು ಸಿಕ್ಕಿದೆ. ಜಾಮೀನು ಸಿಕ್ಕಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೇ ಆರೋಪಿಗಳು ಐದು ಕಾರುಗಳ ಮೂಲಕ ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ದುರುಳರ ಮೇಲೆ ಮತ್ತೆ ಪ್ರಕರಣ ದಾಖಲಿಸಿ ಪೊಲೀಸರು ಒಳಗೆ ಹಾಕಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.