ಬೆಳಗಾವಿ: ತನಗೆ ಬೆಂಬಲ ಸೂಚಿಸುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಹಿಂದುಳಿದ ಹಾಗೂ ಪರಿಶಿಷ್ಟ ನಾಯಕರಿಗೆ ಬೆದರಿಕೆ ಹಾಕಿದ್ದಾರೆ. ಅವರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ ಸಮುದಾಯದವರೇ ಹೊರತು; ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು.
ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಟ್ಟು ಹೋರಾಟಗಾರರಾಗಿರುವ ಬಿ.ಎಸ್.ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ವಿಜಯೇಂದ್ರ ಸಮನಲ್ಲ. ಜೀನ್ಸ್ ಪ್ಯಾಂಟು- ಟೀ ಶರ್ಟು ಹಾಕಿಕೊಂಡು ಓಡಾಡುವ ವಯಸ್ಸು ಅವರದ್ದು. ಪಾಪ ಅವರಿಗೆ ರಾಜಕೀಯ ಗೊತ್ತಿಲ್ಲ. ಉತ್ತಮ ಭವಿಷ್ಯವಿದೆ. ಈಗ ಪದವಿ ತ್ಯಾಗ ಮಾಡಲಿ ಎಂದು ಹೇಳಿದರು.
ಬಿಜೆಪಿಯ ಶೇ 70ರಷ್ಟು ಶಾಸಕರು ನನ್ನ ಸ್ನೇಹಿತರಾಗಿದ್ದಾರೆ. ಆದರೆ, ಮುಕ್ತವಾಗಿ ನಿಲುವು ಪ್ರಕಟಿಸಲು ಅವರಿಗೆ ಆಗುತ್ತಿಲ್ಲ. ಹಿಂದೆ ಸರಿಯಿರಿ ಎಂದು ಎಲ್ಲ ಶಾಸಕರು ನಮಗೆ ಹೇಳಿದರು ನಾವೂ ಹಿಂದೆ ಸರಿಯುತ್ತೇವೆ ಎಂದೂ ಪ್ರತಿಕ್ರಿಯಿಸಿದರು.
ರೇಣುಕಾಚಾರ್ಯಗೆ ಬೇರೆ ದಾರಿ ಇಲ್ಲ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ವಿಜಯೇಂದ್ರ ಜೊತೆಗಿದ್ದಾರೆ ಅಷ್ಟೇ ಎಂದರು.