ಮೈಸೂರು: ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ವಕ್ಫ್ ಬೋರ್ಡ್ ಬಡವರ ಜಮೀನು ನುಂಗುತ್ತಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತ ಬಹುಸಂಖ್ಯಾತರನ್ನು ನಿರ್ಲಕ್ಷ್ಯ ಮಾಡಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟರೇ ಸರ್ಕಾರವೇ ಹೊಣೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಸಿದರು.
ಮೈಸೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಮೈಸೂರಿನ ಮುನೇಶ್ವರ ನಗರ ಮುಲ್ಲಾ ನಗರವಾಗಿ ಬದಲಾಗಿದ್ದು, ಇಲ್ಲಿನ ಬಸವಣ್ಣನ ಮಠದ ಆಸ್ತಿಯನ್ನೂ ವಕ್ಫ್ ನುಂಗುತ್ತಿದೆ. ದೇಗುಲ, ಮಠ, ಶ್ರೀಸಾಮಾನ್ಯರ ಆಸ್ತಿಗೆ ಕಿಂಚಿತ್ತು ಧಕ್ಕೆಯಾದರೆ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.
ಮನಮೋಹನ್ ಸಿಂಗ್ ಕಾಲದಲ್ಲಿ ಜಾರಿಗೊಂಡ ವಕ್ಫ್ ಕಾಯ್ದೆಗೆ ಕೇಂದ್ರ ಎನ್‌ಡಿಎ ಸರ್ಕಾರ ತಿದ್ದುಪಡಿ ತರುತ್ತಿದ್ದು, ಆದಷ್ಟು ಶೀಘ್ರ ಇದನ್ನು ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕೆಲವು ಅಧಿಕಾರಿಗಳು ನೋಟಿಸ್ ಕೊಟ್ಟಿರಬಹುದು. ಆದರೆ ರೈತರಿಗೆ ಬೆದರಿಸುವ ಧೈರ್ಯ ಮಾಡಿರಲಿಲ್ಲ. ಆದರೆ ಸಚಿವ ಜಮೀರ್ ವರು ಸಿದ್ದರಾಮಯ್ಯ ಹೆಸರು ಹೇಳಿಕೊಂಡು ಅಧಿಕಾರಿಗಳನ್ನು ಬೆದರಿಸಿ, ಜಿಲ್ಲೆಗೊಂದು ಸಭೆ ನಡೆಸಿ ವಕ್ಫ್ ಆಸ್ತಿ ಎಂದು ದಾಖಲೆ ಬದಲಿಸಿದ್ದಾರೆ. ರೈತರಿಗೆ ನೋಟಿಸ್ ಕೊಟ್ಟ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು ಎಂದು ಹೇಳಿದರು.