Publish Date: Wed, 04 Jan 2023 (18:01 IST)
Updated Date: Wed, 04 Jan 2023 (18:03 IST)
ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧ ಒಂದು ವರ್ಷ ಸಮೀಪಿಸುತ್ತಿದೆ. ಇದು ಅಪಾರ ಪ್ರಮಾಣದ ಪ್ರಾಣ, ಆಸ್ತಿ ಹಾನಿ ಉಂಟು ಮಾಡಿದೆ. ಹೊಸ ವರ್ಷಾಚರಣೆಯ ಮಧ್ಯೆಯೂ ಉಕ್ರೇನ್ ನಡೆಸಿದ ಬಾಂಬ್ ದಾಳಿಯಲ್ಲಿ ರಷ್ಯಾದ 63 ಸೈನಿಕರು ಸಾವನ್ನಪ್ಪಿದ್ದಾರೆ. 63 ಅಲ್ಲ 100ಕ್ಕೂ ಅಧಿಕ ಸೈನಿಕರು ಹತರಾಗಿದ್ದಾರೆಂದು ಉಕ್ರೇನ್ ಹೇಳಿಕೊಂಡಿದೆ. ಡೊನೆಟ್ಸ್ಕ್‌ನ ಮಕಿವ್ಕಾ ಪ್ರದೇಶದಲ್ಲಿ ರಷ್ಯಾದ ಸಶಸ್ತ್ರ ಪಡೆಗಳ ಒಂದು ಘಟಕವನ್ನು ಉಕ್ರೇನಿಯನ್ ಪಡೆಗಳು ಅಮೆರಿಕ ನಿರ್ಮಿತ ಹಿಮಾರ್ಸ್‌ನ 6 ರಾಕೆಟ್‌ಗಳಿಂದ ದಾಳಿ ಮಾಡಿವೆ. ಇದರಲ್ಲಿ ನಮ್ಮ 63 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ ನಾಲ್ಕು ರಾಕೆಟ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾ ಪಡೆಗಳನ್ನೇ ಗುರಿಯಾಗಿಸಿಕೊಂಡು ಉಕ್ರೇನ್ ಶಿಪಿಲೋವ್ಕಾ, ಲಿಮನ್, ಸ್ಕೆಲ್ಕಿ ಪ್ರದೇಶಗಳ ಮೇಲೆ ನಿರಂತರ ರಾಕೆಟ್ ದಾಳಿ ನಡೆಸಿತು. ಇದರಲ್ಲಿ ಡೊನೆಟ್ಸ್ಕ್ ಪ್ರದೇಶದಲ್ಲಿ ಸೈನಿಕರು ಹತರಾಗಿದ್ದಾರೆ ಎಂದು ರಷ್ಯಾದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದೆಡೆ, ಬೆರಿಸ್ಲಾವ್ ನಗರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಐದು ಉಕ್ರೇನಿಗರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉಕ್ರೇನ್ ತಿಳಿಸಿದೆ. ನಗರದ ಮಾರುಕಟ್ಟೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಆಡಳಿತ ಹೇಳಿದೆ.