ರಾಜಧಾನಿಯಲ್ಲಿ ಮತ್ತೆ ಪೊಲೀಸರ ರಿವಾಲ್ವರ್ ಸದ್ದು ಮಾಡಿದೆ. ಹೆಣ್ಣೂರಿನ ಬಳಿ ಲಾರಿ ಚಾಲಕ ಕೇಶವ್ ಅವರನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಅಭಿಷೇಕ್ಗೆ ಮಧ್ಯರಾತ್ರಿ ಪೊಲೀಸ್ ಗುಂಡು ಹೊಡೆದು ಬಂಧಿಸಿದ್ದಾರೆ.
ಹೆಣ್ಣೂರು ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಡಿ.ಕುಲಕರ್ಣಿ ಹಾರಿಸಿದ ಗುಂಡು ತಗುಲಿ ಬಲಗಾಲಿಗೆ ಗಾಯಗೊಂಡಿರುವ ವಡ್ಡರಪಾಳ್ಯದ ಅಭಿಷೇಕ್(19)ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಂಧಿಸಲು ಹೋದಾಗ ಅಭಿಷೇಕ್ ಚಾಕುವಿನಿಂದ ಇರಿದಿದ್ದರಿಂದ ಗಾಯಗೊಂಡಿರುವ ಹೆಣ್ಣೂರು ಠಾಣೆಯ ಪೇದೆ ಸಂತೋಷ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಳೆದ ನ, 30ರಂದು ರಾತ್ರಿ ಲಾರಿ ಚಾಲಕ ಕೇಶವ್ನನ್ನು ಇತರ ನಾಲ್ವರ ಜೊತೆ ಸೇರಿ ಕೊಲೆ ಮಾಡಿದ್ದ ಅಭಿಷೇಕ್ ರಾತ್ರಿ 1.45ರ ವೇಳೆ ಮನೆಗೆ ಬಟ್ಟೆ ಬದಲಿಸಲು ಬರುತ್ತಿರುವ ಖಚಿತ ಮಾಹಿತಿ ಆಧರಿಸಿ ಹೆಣ್ಣೂರು ಬಂಡೆ ಬಳಿ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಡಿ.ಕುಲಕರ್ಣಿ ಮತ್ತವರ ತಂಡ ಕಾದು ಕುಳಿತಿತ್ತು.
ಅಭಿಷೇಕ್ ಬರುತ್ತಿರುವುದನ್ನು ಕಂಡ ಪೊಲೀಸ್ ಸಿಬ್ಬಂದಿ ಸಂತೋಷ್ ಬೆನ್ನಟ್ಟಿ ಆತನನ್ನು ಹಿಡಿಯಲು ಹೋದಾಗ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡಿದ್ದಾನೆ. ಕೂಡಲೇ ಕುಲಕರ್ಣಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಬೆನ್ನಟ್ಟಿ ಹೇಳಿದರೂ ಮತ್ತೆ ಚಾಕು ಹಿಡಿದು ನುಗ್ಗಿದ್ದರಿಂದ ಆತ್ಮರಕ್ಷಣೆಗಾಗಿ ಮತ್ತೊಂದು ಗುಂಡು ಹಾರಿಸಿದ್ದಾರೆ.