ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವುದು ಕೊನೆಗೂ ಫೈನಲ್ ಆಗಿದೆ. ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯಗೆ ಬಿಜೆಪಿ ಟಿಕೆಟ್ ನೀಡಿರುವುದು ಕಾರ್ಯಕರ್ತರನ್ನು ಅಚ್ಚರಿಯ ಜತೆಗೆ ಅಸಮಾಧಾನಕ್ಕೆ ದೂಡಿದೆ.
ಇಲ್ಲಿ ಇದುವರೆಗೆ ದಿವಂಗತ ಅನಂತ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಗೇ ಟಿಕೆಟ್ ಸಿಗಬಹುದು ಎಂಬುದು ಬಿಜೆಪಿಯ ಕೆಲವು ಕಾರ್ಯಕರ್ತರ ನಿರೀಕ್ಷೆಯಾಗಿತ್ತು. ಆದರೆ ತೇಜಸ್ವಿನಿಗೆ ಟಿಕೆಟ್ ಕೊಡುವುದಕ್ಕೆ ಆರ್. ಅಶೋಕ್ ಸೇರಿದಂತೆ ಕೆಲವು ನಾಯಕರಿಗೆ ಅಸಮಾಧಾನವಿತ್ತು.
ಅಂತೂ ಕೊನೆಗೂ ಇಲ್ಲಿ ತೇಜಸ್ವಿನಿಗೆ ಟಿಕೆಟ್ ಸಿಗಲೇ ಇಲ್ಲ. ಅದರ ಬದಲು ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿರುವುದು ತೇಜಸ್ವಿನಿ, ಅನಂತಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ನೂರಾರು ಜನ ತೇಜಸ್ವಿನಿ ಮನೆ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೆಲ್ಲಾ ಬೆಳವಣಿಗೆ ನಂತರ ತೇಜಸ್ವಿನಿ ಅನಂತಕುಮಾರ್ ತಮ್ಮ ಬೆಂಬಲಿಗರಿಗೆ ಟ್ವಿಟರ್ ನಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ‘ಎಲ್ಲಾ ಬಿಜೆಪಿಯ ಕಾರ್ಯಕರ್ತರೇ, ಹಿತೈಷಿಗಳೇ, ನನಗೆ ಟಿಕೆಟ್ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುವ ಬದಲು ನಾವು ಇತರರಿಗಿಂತ ವ್ಯತ್ಯಸ್ಥ ಪಕ್ಷದವರು ಎಂದು ತೋರಿಸಿಕೊಳ್ಳೋಣ. ಅನಂತ್ ಯಾವತ್ತೂ ದೇಶ ಮೊದಲು, ಪಕ್ಷ ನಂತರ, ನಾನು ಕೊನೆಯವ ಎನ್ನುತ್ತಿದ್ದರು. ಅವರ ಸಿದ್ಧಾಂತದ ಹಾದಿಯಲ್ಲೇ ನಡೆಯುವವಳು ನಾನು. ವರಿಷ್ಠರು ಕೈಗೊಂಡ ನಿರ್ಧಾರವನ್ನು ಗೌರವಿಸೋಣ. ಮೋದಿಯನ್ನು ಮತ್ತೊಮ್ಮೆ ಗೆಲ್ಲಿಸೋಣ’ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!