ಬೆಂಗಳೂರು: ಜೈಲಿನಲ್ಲಿ ಕೆಲ ಜೈದಿಗಳಿಗೆ ರಾಜಾತಿಥ್ಯ ದೊರಕುತ್ತಿರುವ ಬಗ್ಗೆ ಕೆಂಡಾಮಂಡಲವಾದ ಗೃಹ ಸಚಿವ ಪರಮೇಶ್ವರ್ ಅವರು ಈ ಬಗ್ಗೆ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ದಿಂಬು, ಹಾಸಿಗೆಗೆ ಕೋರ್ಟ್‌ನಲ್ಲಿ ಮನವಿ ಮಾಡುತ್ತಾರೆ. ಆದರೆ ಕೆಲ ಕೈದಿಗಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದು ಜೈಲಿನ ಅವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.
ಜೈಲಿನಲ್ಲಿ ಪದೇಪದೇ ಹೀಗಾಗುತ್ತದೆ ಎಂದು ಹಿಂದೆಯೂ ಕ್ರಮ ತೆಗೆದುಕೊಂಡಿದ್ದೆವು. ಕಾರಾಗೃಹ ವಿಭಾಗದ ಡಿಜಿಪಿ ದಯಾನಂದ್ ಅವರ ಜತೆ ಚರ್ಚಿಸಿದ್ದೇನೆ. ಪದೇ ಇದೇ ಇದು ನಡೆಯುತ್ತಿದೆ. ಯಾರು ಉಸ್ತುವಾರಿ ಇದ್ದಾರೆ ಅವರ ವಿರುದ್ಧ ಕ್ರಮ ಆಗಲೇಬೇಕು. ಇದನ್ನೆಲ್ಲ ಸಹಿಸಲು ಸಾಧ್ಯವಿಲ್ಲ ಎಂದು ತೀಷ್ಣವಾಗಿ ಪ್ರತಿಕ್ರಿಯಿಸಿದರು.
ರಾಜಾತಿಥ್ಯ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು ದಯಾನಂದ್ ಅವರಿಂದ ವರದಿ ಕೇಳಿದ್ದೇನೆ. ನಾನೇ ಅಧಿಕಾರಿಗಳ ಸಭೆ ಕರೆಯುತ್ತೇನೆ. ದಯಾನಂದ್ ಅವರು ವರದಿ ಕೊಟ್ಟಮೇಲೆ ಪರಿಶೀಲನೆ ನಡೆಸುತ್ತೇವೆ. ವರದಿ ನಮಗೆ ಸಮಾಧಾನ ಆಗದೇ ಇದ್ದರೆ ಉನ್ನತ ಮಟ್ಟದ ತನಿಖೆ ಮಾಡುತ್ತೇವೆ. ತನಿಖೆಗೆ ಸಮಿತಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.
ನಿನ್ನೆಯಷ್ಟೇ ಉಮೇಶ್ ರೆಡ್ಡಿ, ತರುಣ್ ಕೊಂಡೂರು ಹಾಗೂ ಶಂಕಿತ ಉಗ್ರ ಶಕೀಲ್ ಜೈಲಿನಲ್ಲಿ ಮೊಬೈಲ್ ಹಿಡಿದಿದ್ದ ಫೋಟೋಸ್ ವೈರಲ್ ಆಗಿತ್ತು. ಇದೀಗ ಮತ್ತಷ್ಟು ವಿಡಿಯೋ ಹೊರಬಿದ್ದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.