ಬೆಳಗಾವಿ: ಒಂದೆಡೆ ಡಿಕೆ ಶಿವಕುಮಾರ್ ಟೆಂಪಲ್ ರನ್ ನಡೆಸಿದ್ದರೆ ಇತ್ತ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಸಿಎಂ ಬದಲಾವಣೆ ಬಗ್ಗೆ ಶಾಕಿಂಗ್ ಘೋಷಣೆಯೊಂದನ್ನು ಮಾಡಿದ್ದಾರೆ.
ರಾಜ್ಯದಲ್ಲಿ ಸಿಎಂ ಕುರ್ಚಿ ಕಾಳಗ ತಾರಕಕ್ಕೇರಿರುವಾಗಲೇ ಇತ್ತ ಸಿದ್ದರಾಮಯ್ಯ ಇಂದು ಸದನದಲ್ಲೇ ಐದು ವರ್ಷವೂ ನಾನೇ ಸಿಎಂ ಎಂದು ಘೋಷಣೆ ಮಾಡಿದ್ದಾರೆ. ವಿಪಕ್ಷ ಶಾಸಕ ಸುನಿಲ್ ಕುಮಾರ್ ನೀವೇ ಇರುತ್ತೀರಾ ಇಲ್ವಾ ಎಂದು ಸ್ಪಷ್ಟನೆ ಕೇಳಿದಾಗ ಕೆರಳಿದ ಸಿದ್ದರಾಮಯ್ಯ ಐದೂ ವರ್ಷವೂ ನಾನೇ ಸಿಎಂ ಎಂದಿದ್ದಾರೆ.
ಮೊನ್ನೆಯವರೆಗೂ ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಈಗ ದಿಡೀರ್ ವರಸೆ ಬದಲಿಸಿದ್ದಾರೆ. ಈ ಮೂಲಕ ತಾನು ಕುರ್ಚಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಡಿಕೆ ಶಿವಕುಮಾರ್ ಬಣಕ್ಕೆ ಸಂದೇಶ ರವಾನಿಸಿದ್ದಾರೆ.
ಇನ್ನೊಂದೆಡೆ ಡಿಕೆಶಿ ಇಷ್ಟಾರ್ಧ ಸಿದ್ಧಿಗಾಗಿ ಅಂಕೋಲದ ಶಕ್ತಿದೇವತೆ ದರ್ಶನ ಮಾಡಿ ಪೂಜೆ ಮಾಡಿಸಿದ್ದಾರೆ. ಅವರ ಸಂಕಲ್ಪವೇನೆಂದು ರಹಸ್ಯವಾಗಿಯೇ ಇಡಲಾಗಿದೆ. ಇತ್ತ ಡಿಕೆಶಿ ಟೆಂಪಲ್ ರನ್ ನಲ್ಲಿರುವಾಗಲೇ ಸಿದ್ದರಾಮಯ್ಯ ಕುರ್ಚಿ ಬಿಟ್ಟುಕೊಡಲ್ಲ ಎಂದು ಘೋಷಿಸಿದ್ದು ಮುಂದೆ ಕಾಂಗ್ರೆಸ್ ನಲ್ಲಿ ಯಾವ ರೀತಿಯ ಬೆಳವಣಿಗೆಯಾಗಲಿದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.