Publish Date: Thu, 18 Dec 2025 (14:27 IST)
Updated Date: Thu, 18 Dec 2025 (14:28 IST)
ಬೆಳಗಾವಿ: ವಿಜಯೇಂದ್ರ ಕಲೆಕ್ಷನ್ ಕಿಂಗ್, ಅವರಪ್ಪನ ಹೆಸರು ಕೆಡಿಸಿದವರು. ಅವರ ದಂಧೆ ಎಲ್ಲಾ ಬಿಚ್ಚಿಡಬೇಕಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಖಜಾನೆ ಲೂಟಿ ಮಾಡಿ ಹೈಕಮಾಂಡ್ ಗೆ ನೀಡುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕೆಗೆ ಡಿಕೆ ಶಿವಕುಮಾರ್ ಇಂದು ಫುಲ್ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ವಿಜಯೇಂದ್ರ ಕರ್ಮಕಾಂಡವನ್ನೆಲ್ಲಾ ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಲೆಕ್ಷನ್ ಕಿಂಗ್ ಎಂದರೆ ಅದು ವಿಜಯೇಂದ್ರ. ಅವರ ಕಾಲದಲ್ಲಿ ಎಷ್ಟು ಕಲೆಕ್ಷನ್ ಮಾಡಿದ್ರು, ಎಷ್ಟು ವರ್ಗಾವಣೆ ದಂಧೆ ಮಾಡಿದ್ರು ಎಂಬುದನ್ನೆಲ್ಲಾ ಇಲ್ಲಿ ಬಿಚ್ಚಿಡಬೇಕಾ? ಅವರಪ್ಪನ ಹೆಸರು ಕೆಡಿಸಿದ್ದು ವಿಜಯೇಂದ್ರ ಎಂದು ಡಿಕೆಶಿ ಗರಂ ಆಗಿ ಕೇಳಿದ್ದಾರೆ.
ವಿಜಯೇಂದ್ರಗೆ ಅನುಭವವಿಲ್ಲ. ಜನರ ಹಾದಿ ತಪ್ಪಿಸಲು ಖಜಾನೆ ಖಾಲಿಯಾಗಿದೆ ಎನ್ನುತ್ತಿದ್ದಾರೆ. ಸಾಧ್ಯವಿದ್ದರೆ ಸದನಕ್ಕೆ ಬಂದು ಪ್ರಶ್ನೆ ಮಾಡಲಿ. ರಾಜ್ಯ ಸರ್ಕಾರ ರೈತರ ಪರವಾಗಿದೆ. ಮೆಕ್ಕೆ ಜೋಳ, ಕಬ್ಬು ಬೆಳೆಗಾರರಿಗೆ ಬೆಂಬಲ ನೀಡಿದ್ದೇವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮತ್ತು ಕಬ್ಬು ಕಾರ್ಖಾನೆಗಳಿಗೆ ಹೊರೆಯಾಗಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.