Publish Date: Mon, 15 Dec 2025 (08:38 IST)
Updated Date: Mon, 15 Dec 2025 (08:45 IST)
ದಾವಣಗೆರೆ: ನಿನ್ನೆ ನಿಧನರಾಗಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅಂತಿಮ ಕ್ರಿಯೆ ಇಂದು ನೆರವೇರಲಿದೆ. ಪತ್ನಿ ಸಮಾಧಿ ಪಕ್ಕವೇ ಶಿವಶಂಕರಪ್ಪ ಚಿರನಿದ್ರೆಗೆ ಜಾರಲಿದ್ದಾರೆ.
ವಯೋಸಹಜ ಖಾಯಿಲೆಯಿಂದ ನಿಧನರಾಗಿರುವ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಣಿ ಎಂದೇ ಪರಿಚಿತರು. ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ನಾಯಕ. ಹೀಗಾಗಿ ಅವರ ಅಂತ್ಯಕ್ರಿಯೆಗೆ ಸಾಕಷ್ಟು ಜನ ಸ್ವಾಮೀಜಿಗಳು, ಸಮುದಾಯದ ಮುಖಂಡರು ಸಾಕ್ಷಿಯಾಗಲಿದ್ದಾರೆ.
ಇಂದು ಬೆಳ್ಳಂ ಬೆಳಿಗ್ಗೆಯೇ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರ ತವರು ದಾವಣಗೆರೆಗೆ ತಲುಪಿದೆ. ಮಧ್ಯಾಹ್ನ 12 ಗಂಟೆಯವರೆಗೆ ಪುತ್ರ ಎಸ್ಎಸ್ ಮಲ್ಲಿಕಾರ್ಜುನ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಸಂಜೆ ನಾಲ್ಕು ಗಂಟೆಯವರೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ. ಇದಾದ ಬಳಿಕ ಸಂಜೆ 5.30 ಕ್ಕೆ ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಯಲಿದೆ.
ಆನೆಕೊಂಡದ ಶಾಮನೂರು ರೈಸ್ ಮಿಲ್ ಬಳಿ ಅವರ ಕುಟುಂಬಸ್ಥರ ಸಮಾಧಿ ಸ್ಥಳವಿದೆ. ಅಲ್ಲಿ ಪತ್ನಿ ಸಮಾಧಿ ಪಕ್ಕವೇ ಶಾಮನೂರು ಅವರ ಅಂತಿಮ ಕ್ರಿಯೆ ನಡೆಯಲಿದೆ. ಇದಕ್ಕಾಗಿ ನಿನ್ನೆಯಿಂದ ಇಲ್ಲಿ ಸಿದ್ಧತೆ ನಡೆದಿದೆ.