ದಾವಣಗೆರೆ: ಇಲ್ಲಿನ ಮಟ್ಟಿಕಲ್‌ನ ಗಣೇಶಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಅಳವಡಿಸಿದ್ದ ವಿವಾದ ಸೃಷ್ಟಿಸಿದ ಫ್ಲೆಕ್ಸ್ ಅನ್ನು ಪೊಲೀಸರು ತೆರವು ಮಾಡಿದ್ದಾರೆ.
ಗುರುವಾರ ರಾತ್ರಿ ನಿರ್ಮಾಣವಾಗಿದ್ದ ಬಿಗುವಿನ ವಾತಾವರಣ ಫ್ಲೆಕ್ಸ್ ಅನ್ನು ತೆರವುಗೊಳಿಸುವ ಮೂಲಕ ತಿಳಿಕೊಂಡಿದೆ.
ಶಿವಾಜಿ ಮಹಾರಾಜ್ ಹಾಗೂ ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶದ ಆಕ್ಷೇಪಾರ್ಹ ಫ್ಲೆಕ್ಸ್ ತೆರವುಗೊಂಡಿದ್ದು, ಈ ಸ್ಥಳದಲ್ಲಿ ಶಿವಾಜಿಯ ಬೃಹತ್ ಚಿತ್ರವನ್ನು ಅಳವಡಿಸಲಾಗಿದೆ.
ನಗರದ ವೀರ ಸಾವರ್ಕರ್ ಯುವಕರ ಸಂಘ ಮಟ್ಟಿಕಲ್‌ನಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯ ಪೆಂಡಾಲ್ ಬಳಿ ಇತಿಹಾಸದ ಮಹನೀಯರ ಬೃಹತ್ ಗಾತ್ರದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು.
ಶಿವಾಜಿ ಹಾಗೂ ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶದ ಫ್ಲೆಕ್ಸ್ ಭಾರೀ ವಿವಾದವನ್ನು ಸೃಷ್ಟಿಸಿತು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ತೆರವು ಮಾಡಿದ್ದಾರೆ.
ರಾತ್ರಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆಕ್ಷೇಪಾರ್ಹ ಚಿತ್ರ ತೆರವುಗೊಳಿಸುವಂತೆ ಗಣೇಶ ಉತ್ಸವ ಸಮಿತಿಗೆ ಸೂಚಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನೂರಾರು ಯುವಕರು, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಇದರಿಂದ ಗುರುವಾರ ಮಧ್ಯರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಂಘಪರಿವಾರ ಸಂಘಟನೆಯ ಮುಖಂಡರೊಂದಿಗೆ ಸುಧೀರ್ಘ ಚರ್ಚೆ ನಡೆಸಿದ ಪೊಲೀಸರು ವಾತಾವರಣ ತಿಳಿಸಿದರು.