ದಾವಣಗೆರೆ: ರಾಟ್ ವೀಲರ್ ನಾಯಿಯ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ದಾವಣಗೆರೆ ಹೊರ ವಲಯದ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ನಾಯಿ ದಾಳಿಗೆ ಸಾವನ್ನಪ್ಪಿದ ಮಹಿಳೆಯನ್ನು ಅನಿತಾ 38 ವರ್ಷ ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ ಕಾರಿನಲ್ಲಿ ಬಂದ ಅಪರಿಚಿತರು 2 ರಾಟ್ ವೀಲರ್ ಜಾತಿಯ ನಾಯಿಗಳನ್ನು ಹೊನ್ನೂರು ಗೊಲ್ಲರಹಟ್ಟಿಯ ಬಳಿ ಬಿಟ್ಟು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಮನೆಯಿಂದ ಹೊರಬಂದಿದ್ದ ಮಹಿಳೆ ಮೇಲೆ ಶ್ವಾನಗಳು ಏಕಾಏಕಿ ದಾಳಿ ನಡೆಸಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಶಿರಾ ತಾಲೂಕು ಅಸ್ಪತ್ರೆಯ ಶವಗಾರದಲ್ಲಿ ಮಹಿಳೆಯ ಮೃತದೇಹವನ್ನು ಶವಪರಿಕ್ಷೆ ನಡೆಸಲಾಗಿದೆ. ಮಹಿಳೆಗೆ ಸುಮಾರು 50 ಕಡೆಗಳಲ್ಲಿ ನಾಯಿ ಕಚ್ಚಿದೆ ಎಂದು ತಿಳಿದು ಬಂದಿದೆ.
ಇನ್ನೂ ಅಲ್ಲೇ ಜಮೀನಿನಲ್ಲಿ ಬೀಡು ಬಿಟ್ಟಿದ್ದ ನಾಯಿಗಳನ್ನು ಹಿಡಿದು, ಕಾಲಿಗೆ ಹಗ್ಗ ಬಿಗಿದು ಕೋಲಿಗೆ ಕಟ್ಟಿಕೊಂಡು ಗ್ರಾಮಸ್ಥರು ಎಳೆದುಕೊಂಡು ಹೋಗಿದ್ದಾರೆ. ಇನ್ನೂ ಮಾರ್ಗದಲ್ಲಿ ನಾಯಿಗಳನ್ನು ತಂದು ಬಿಟ್ಟ ನಾಯಿ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.