ಬೆಳಗಾವಿ: ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಡುತ್ತಿದ್ದ ಬೆನ್ನಲ್ಲೇ ಇದೀಗ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಗೋಕಾಕ್‌ನ ಅಂಕಲಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಏಕವಚನದಲ್ಲೇ ಗುಡುಗಿದ್ದಾರೆ.
ನಮ್ಮ ಪಕ್ಷದಲ್ಲಿ ಜಗಳ ಇದೆ. ಅದು ಕೇವಲ ಅಧ್ಯಕ್ಷ ಸ್ಥಾನ ಬದಲಾವಣೆಗಾಗಿ ಮಾತ್ರ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗದಿದ್ದರೂ ಪಕ್ಷ ಸಂಘಟನೆ ಮಾಡುತ್ತೇವೆ
ಎಂದರು.
ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಕೌಂಟರ್ ಕೊಟ್ಟ ಅವರು, ಯಡಿಯೂರಪ್ಪ ಅವರು ಎಂದಿಗೂ ನಮ್ಮ ನಾಯಕನೇ. ಅವರ ಬಗ್ಗೆ ಅಗೌರವದಿಂದ ಎಂದು ಮಾತನಾಡಿಲ್ಲ. ಆದರೆ ನೀನು ಸುಳ್ಳು ಹೇಳುವುದನ್ನು ಬಿಡು. ನಾನು ಶಿಕಾರಿಪುರಕ್ಕೆ ಬರುತ್ತೇನೆ. ನಿನ್ನ ಮನೆಯ ಮುಂದೆಯಿಂದಲೇ ಪ್ರವಾಸ ಶುರು ಮಾಡುತ್ತೇನೆ. ನೀನು ದಿನಾಂಕ ನಿಗದಿ ಮಾಡು. ಬೆಂಬಲಿಗರು ಬರಲ್ಲ ಗನ್ ಮ್ಯಾನ್ ಬರಲ್ಲ, ನಾನೊಬ್ಬನೇ ಬರುತ್ತೇನೆ. ಅಲ್ಲಿಂದಲೇ ಪ್ರವಾಸ ಶುರು ಮಾಡುತ್ತೇನೆ ತಡಿ ನೋಡೊಣ ಎಂದು ಸವಾಲೆಸೆದರು.
ಇನ್ನೂ ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ಗುಡುಗಿದ ಜಾರಕಿಹೊಳಿ, ನಿನ್ನನ್ನು ರಾಜ್ಯದಲ್ಲಿ ಓಡಾಡದ ಹಾಗೆ ಮಾಡುವ ಶಕ್ತಿ ನನಗಿದೆ. ನಿನ್ನಂತ ಕೀಳು ಮಟ್ಟದ ರಾಜಕೀಯ ಮಾಡಲು ನನಗೆ ಬರಲ್ಲ. ಅಧ್ಯಕ್ಷ ಸ್ಥಾನದ ಬಗ್ಗೆಯಷ್ಟೇ ನನಗೆ ಗೌರವಿದ್ದು, ವಿಜಯೇಂದ್ರ ಬಗ್ಗೆ ಯಾವುದೇ ಗೌರವ ಇಲ್ಲ ಎಂದರು.