ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿರುವಾಗಲೇ ಡಿಕೆ ಶಿವಕುಮಾರ್ ಕೈಗೆ ಸಿಗದ ರಾಹುಲ್ ಗಾಂಧಿ ಬೇರೆ ನಾಯಕರನ್ನು ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.
ನವಂಬರ್ ನಿಂದ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಚರ್ಚೆ ಶುರುವಾದಾಗಿನಿಂದ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಡಿಕೆ ಶಿವಕುಮಾರ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಮೊನ್ನೆ ಕೊನೆಗೂ ಮೈಸೂರಿನಲ್ಲಿ ಏರ್ ಪೋರ್ಟ್ ನಲ್ಲಿ ಮುಖಾಮುಖಿಯಾಗಿದ್ದರು.
ಆದರೆ ಈ ವೇಳೆ ನಾಯಕತ್ವ ಗೊಂದಲದ ಬಗ್ಗೆ ಕೇಳಿದಾಗ ರಾಹುಲ್ ಗಾಂಧಿಯವರು ದೆಹಲಿಗೆ ಬನ್ನಿ, ಅಲ್ಲಿ ಚರ್ಚೆ ಮಾಡೋಣ ಎಂದಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಡಿಕೆ ಶಿವಕುಮಾರ್ ನಿನ್ನೆಯಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಆದರೆ ಡಿಕೆಶಿಗೆ ಭೇಟಿಗೆ ಟೈಂ ಕೊಡುವ ಮೊದಲು ಕೆಜೆ ಜಾರ್ಜ್ ರನ್ನು ರಾಹುಲ್ ಗಾಂಧಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇದಕ್ಕೆ ಮೊದಲು ಡಿಕೆಶಿ ದೆಹಲಿಗೆ ಹೋದಾಗಲೂ ಅವರಿಗಿಂತ ಮೊದಲೇ ಪ್ರಿಯಾಂಕ್ ಖರ್ಗೆ, ಬಿಕೆ ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಬಂದಿದ್ದರು. ಈ ಬಾರಿ ಅಸ್ಸಾಂ ಚುನಾವಣೆ ವಿಚಾರವಾಗಿ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಡಿಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಪರಸ್ಪರ ಭೇಟಿಯಾಗಿದ್ದಾರೆ. ಆದರೆ ಈ ವೇಳೆ ರಾಜ್ಯ ರಾಜಕೀಯದ ಬಗ್ಗೆ ಚರ್ಚೆಯಾಗಿರುವ ಸಾಧ್ಯತೆಯಿಲ್ಲ. ರಾಹುಲ್ ಗಾಂಧಿಯವರ ಈ ನಡೆ ನಿಜಕ್ಕೂ ಕುತೂಹಲ ಮೂಡಿಸಿದೆ.