ಗದಗ: ರಾಜ್ಯದಾದ್ಯಂತ ಭಾರೀ ಸುದ್ದಿಯಾಗಿದ್ದ ಗದಗ ಜಿಲ್ಲೆಯ ಲಕ್ಕುಂಡಿ ನಿಧಿ ಸಿಕ್ಕ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆಯಾಗಿದೆ. ನಿಧಿ ಸಿಕ್ಕ ಬಳಿಕ ರಾಜ್ಯ ಸರ್ಕಾರ ಶುಕ್ರವಾರ ನಿಧಿ ಹುಡುಕಾಟಕ್ಕೆ ಮುಂದಾಗಿದೆ.
ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿ ಸಿಕ್ಕ ಹಿನ್ನಲೆಯಲ್ಲಿ ಇಂದಿನಿಂದ ಉತ್ಖನನ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಸರ್ಕಾರವು ಶುಕ್ರವಾರದಿಂದ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಪ್ರಾರಂಭಿಸಿದ್ದು, ಗದಗ ಜಿಲ್ಲಾಧಿಕಾರಿ ಸಿಎನ್ ಶ್ರೀಧರ್, ಗ್ರಾಮವನ್ನು ಸ್ಥಳಾಂತರಿಸುವ ನಿರ್ಧಾರವು ಉತ್ಖನನದ ಸಂಶೋಧನೆಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.
ಇನ್ನೂ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶ್ರೀಧರ್ ಅವರು, ಗ್ರಾಮವನ್ನು ಸ್ಥಳಾಂತರಿಸುವುದು ಉತ್ಖನನದಿಂದ ಹೊರಬರುವ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಗ್ರಾಮವನ್ನು ಸ್ಥಳಾಂತರಿಸುವ ಪರಿಸ್ಥಿತಿ ಎದುರಾದರೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಲಕ್ಕುಂಡಿಯಲ್ಲಿ ಕೋಟೆ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಪೂರ್ಣ ಪ್ರಮಾಣದ ಉತ್ಖನನವನ್ನು ಪ್ರಾರಂಭಿಸಲು ಸರ್ಕಾರ ನಿರ್ಧರ ಮಾಡಿದೆ.
ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ, ಲಕ್ಕುಂಡಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ.