ಬೆಂಗಳೂರು: ಕರ್ನಾಟಕ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಹಣ ಮೂರು ತಿಂಗಳಿನಿಂದ ಬಾಕಿಯಿದೆ. ಅನ್ನಭಾಗ್ಯ ಯೋಜನೆಯ ಬಾಬ್ತು ಕೊಡಬೇಕಾದ ಹಣವೂ ಬಾಕಿಯಿದೆ. ರಾಜ್ಯ ಸರ್ಕಾರದ ಬಳಿ ಕೊಡಲು ಹಣವೇ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಮನೆ ಯಜಮಾನಿಯ ಖಾತೆಗೆ ಜಮಾ ಆಗಿಲ್ಲ. ಅನ್ನಭಾಗ್ಯ ಯೋಜನೆಯಡಿ ಕೊಡಬೇಕಾದ ಅಕ್ಕಿಯ ಹಣವನ್ನೂ ಸರ್ಕಾರ ನೀಡಿಲ್ಲ ಎಂದು ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಈ ಬಗ್ಗೆ ಮಾತನಾಡಿದ ಪ್ರಲ್ಹಾದ್ ಜೋಶಿ ಗೃಹಲಕ್ಷ್ಮಿ ಹಣ ಬಂದಿಲ್ಲ, ಅನ್ನಭಾಗ್ಯ ಹಣವೂ ಬಂದಿಲ್ಲ. ಕೇಂದ್ರ ಸರ್ಕಾರವೇ ಹೇಳಿದರೂ ರಾಜ್ಯ ಸರ್ಕಾರ ಅಕ್ಕಿ ಖರೀದಿಸ್ತಿಲ್ಲ. ಇದೀಗ ಅಕ್ಕಿಯೂ ಇಲ್ಲ, ಹಣವೂ ಇಲ್ಲ. ನಮ್ಮ ಬಳಿ ಅಕ್ಕಿಯಿದೆ ಎಂದು ಜೂನ್ ನಲ್ಲೇ ಹೇಳಿದ್ದೆವು. ಮೊದಲು ಕೆ.ಜಿ.ಗೆ 34 ರೂ. ಇತ್ತು. ಈಗ 28 ರೂ.ಗೆ ಕೊಡುತ್ತೇವೆ ಎಂದರೂ ರಾಜ್ಯ ಸರ್ಕಾರ ಖರೀದಿಸ್ತಿಲ್ಲ. ಯಾಕೆಂದರೆ ರಾಜ್ಯ ಸರ್ಕಾರದ ಬಳಿ ದುಡ್ಡೇ ಇಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಇನ್ನು, ಮೆಟ್ರೊ ದರ ಏರಿಕೆಗೆ ಕೇಂದ್ರ ಸರ್ಕಾರ ಕಾರಣ ಎನ್ನುತ್ತಾರೆ. ಟಿಕೆಟ್ ದರ ಕಡಿಮೆ ಮಾಡಿದರೆ ರಾಜ್ಯ ಸರ್ಕಾರದ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ. ಅಂದರೆ ಹೆಚ್ಚಾದರೆ ನಾವು, ಕಡಿಮೆಯಾದರೆ ರಾಜ್ಯ ಸರ್ಕಾರ ಕಾರಣನಾ ಎಂದು ಅವರು ಟೀಕಿಸಿದ್ದಾರೆ.