ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕ ಅಭಿವೃದ್ಧಿಗೆ ಹಣ ಕೊರತೆಯಾಗಿದೆಯೇ ನೋ ವೇ ಛಾನ್ಸೇ ಇಲ್ಲ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಏನು ನೋಡಿ.
ಸಿಎಂ ಸಿದ್ದರಾಮಯ್ಯ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಗ್ಯಾರಂಟಿಯಿಂದಾಗಿ ಕರ್ನಾಟಕದ ಅಭಿವೃದ್ಧಿಗೆ ಅಡ್ಡಿಯಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ವಿಡಿಯೋವೊಂದನ್ನು ಪ್ರಕಟಿಸಿ ಗ್ಯಾರಂಟಿ ಬಗ್ಗೆ ನೈಜ ಸತ್ಯವೇನು ಎಂದು ಬರೆದುಕೊಂಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಸಮಸ್ಯೆಯಾಗಿಲ್ಲ. ನೈಜ ವಿಚಾರವೇನೆಂದರೆ ಗ್ಯಾರಂಟಿ ನಮ್ಮ ಬಜೆಟ್ ನ ಕೇವಲ 14% ಹಣವನ್ನು ಮಾತ್ರ ವಿನಿಯೋಗ ಮಾಡುತ್ತಿದೆ. ಇದು ನಮಗೆ ಭರಿಸಲಾಗದ ಖರ್ಚೇನೂ ಅಲ್ಲ ಎಂದು ಹೇಳಿಕೊಂಡಿದ್ದಾರೆ.
ಆದರೆ ಇದಕ್ಕೆ ನೆಟ್ಟಿಗರು ಮಾತ್ರ ಸಖತ್ ಕೌಂಟರ್ ಕೊಟ್ಟಿದ್ದಾರೆ. ಕರ್ನಾಟಕದ ಬಜೆಟ್ ಇರುವುದೇ 3 ಲಕ್ಷ ಕೋಟಿ. ಇದರಲ್ಲಿ 59000 ಕೋಟಿ ರೂ. ಗ್ಯಾರಂಟಿಗೆ ಬಳಕೆಯಾಗುತ್ತಿದೆ. ಅಂದರೆ ಅದು ಶೇ.14 ಅಲ್ಲ, ಶೇ.20 ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೆನ್ನಾಗಿ ಹೇಳ್ತಿದ್ದೀರಿ, ಒಮ್ಮೆ ಇಡೀ ಬೆಂಗಳೂರು ರೌಂಡ್ಸ್ ಬಂದು ನೋಡಿ. ಯಾವ ರಸ್ತೆ ಎಷ್ಟು ಹದಗೆಟ್ಟಿದೆ ಗೊತ್ತಾಗುತ್ತದೆ. ಮುಂದೊಂದು ದಿನ ಇದೇ ಗ್ಯಾರಂಟಿ ನಮ್ಮನ್ನು ದಿವಾಳಿ ಮಾಡುತ್ತದೆ. ಆಗ ಜನಕ್ಕೆ ಬುದ್ಧಿ ಬರುತ್ತದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಜವಾಗಿ ಗ್ಯಾರಂಟಿ ಹೊರೆ ಅಲ್ಲದೇ ಇದ್ದರೆ ಬೆಲೆ ಏರಿಕೆ ಯಾಕೆ ಮಾಡುತ್ತಿದ್ದೀರಿ ಎಂದೂ ಹಲವರು ಪ್ರಶ್ನೆ ಮಾಡಿದ್ದಾರೆ.