Select Your Language

Notifications

webdunia
webdunia
webdunia
webdunia

ಇದೇ ಕಾರಣಕ್ಕಾ ಪರಪ್ಪನ ಅಗ್ರಹಾರದಲ್ಲಿದ್ದ ಉಗ್ರನಿಗೆ ಮೊಬೈಲ್ ಕೊಡಲಾಯಿತೇ

CT Ravi

Sampriya

ಬೆಂಗಳೂರು , ಮಂಗಳವಾರ, 11 ನವೆಂಬರ್ 2025 (18:19 IST)
ಬೆಂಗಳೂರು: ಆರ್‌ಡಿಎಕ್ಸ್ ಸ್ಫೋಟಕ ಬಳಸುವವರು ಮತ್ತು ಅದನ್ನು ಸಂಗ್ರಹಿಸುವವರು ಯಾರು? ಅವರು ಯಾವ ಶಾಂತಿ ಧರ್ಮಕ್ಕೆ ಸೇರಿದವರೆಂದು ಮುಖ್ಯಮಂತ್ರಿಯವರು ತಿಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸವಾಲು ಹಾಕಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಈಚೆಗೆ ಒಂದು ಸಭೆಯಲ್ಲಿ ಇಸ್ಲಾಂ ಎಂದರೆ ಶಾಂತಿ ಎಂದಿದ್ದರು. ಅದನ್ನು ಒಪ್ಪೋಣ. ಡಾ. ಅಹ್ಮದ್ ಮೊಹಿಯುದ್ದೀನ್ ಸಯೀದ್ ಪ್ರಾಣ ಉಳಿಸುವ ವೈದ್ಯನಲ್ಲ. ಸಾಮೂಹಿಕ ನರಮೇಧದ ತಯಾರಿ ಮಾಡುತ್ತಿದ್ದ ವ್ಯಕ್ತಿ. ಯಾವ ಶಾಂತಿ ಧರ್ಮಕ್ಕೆ ಸೇರಿದವನು ಎಂದು ಕೇಳಿದರು. 

ಇನ್ನೊಬ್ಬ ಸಯ್ಯದ್ ಮೊಹಮ್ಮದ್ ಸುಹೇಲ್ ಮತ್ತು ಆಜಾದ್ ಯಾವ ಶಾಂತಿ ಧರ್ಮಕ್ಕೆ ಸೇರಿದವರು ಎಂದು ಪ್ರಶ್ನಿಸಿದರು.

ದೇಶದ ಉದ್ದಗಲಕ್ಕೆ ಆರ್‌ಡಿಎಕ್ಸ್ ಪತ್ತೆಯಾಗಿದೆ. ಯಾವ ಶಾಂತಿದೂತರು ಅದನ್ನು ಕಳಿಸಿಕೊಟ್ಟರು. ಮುಖ್ಯಮಂತ್ರಿಗಳು ಬೇಹುಗಾರಿಕಾ ದಳದಿಂದ ಈ ಕುರಿತು ವರದಿ ತರಿಸಿಕೊಳ್ಳಲಿ ಎಂದು ಒತ್ತಾಯಿಸಿದರು. 

ಇನ್ನೊಬ್ಬ ಭಯೋತ್ಪಾದಕನಿಗೆ ಇಲ್ಲಿನ ಜೈಲಿನಲ್ಲಿ ಮೊಬೈಲ್ ಕೊಟ್ಟಿದ್ದೀರಲ್ಲವೇ? ಅವನ್ಯಾವ ಶಾಂತಿದೂತ? ದೇಶದ ಉದ್ದಗಲಕ್ಕೆ ಬಾಂಬ್ ಸ್ಫೋಟ ನಡೆಸಲು ನೆರವಾಗಲೆಂದು ಕರ್ನಾಟಕದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಕೊಟ್ಟಿದ್ದೀರಾ ಎಂದು ಕೇಳಿದರು. ಬಾಂಬ್ ಸ್ಫೋಟಕ್ಕೆ ನಿರ್ದೇಶನ ನೀಡಲೆಂದು ಮೊಬೈಲ್ ಕೊಡಲಾಯಿತೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಭಯೋತ್ಪಾದಕರಿಗೆ ಮೊಬೈಲ್ ಕೊಡುವ ಅಯೋಗ್ಯರು ಅಸಮರ್ಥರು

ಪ್ರಿಯಾಂಕ್ ಖರ್ಗೆಯವರೇ, ಅಸಮರ್ಥರು ಎನ್ನುತ್ತೀರಲ್ಲವೇ? ಭಯೋತ್ಪಾದಕರಿಗೆ ಮೊಬೈಲ್ ಕೊಡುವ ಅಯೋಗ್ಯರನ್ನು ಅಸಮರ್ಥರು ಎನ್ನುತ್ತಾರೆ. ಅವರ ನೇತೃತ್ವ ವಹಿಸಿದ ಸರಕಾರವನ್ನು ಅಸಮರ್ಥ ಎನ್ನುತ್ತಾರೆ. 

ಸರ್ಜಿಕಲ್ ದಾಳಿ, ಆಪರೇಷನ್ ಸಿಂದೂರದ ಮೂಲಕ ಉತ್ತರ ಕೊಡುವವರು ಅಸಮರ್ಥರಲ್ಲ ಎಂದು ಸಿ.ಟಿ. ರವಿ ಅವರು ತಿಳಿಸಿದರು.

ಬಿರಿಯಾನಿ ಕೊಡುವುದು ಇದೆಯಲ್ಲವೇ? ಯಾಸಿನ್ ಮಲಿಕ್ ಜೀ ಎನ್ನುವುದು ಇದೆಯಲ್ಲವೇ? ಹಾಗೇ ಪ್ರಧಾನಿ ಕಚೇರಿಗೆ ಕರೆದು ಚಹಾ ಕೊಟ್ಟು ಆಲಂಗಿಸಿಕೊಳ್ಳುವುದು ಅಸಮರ್ಥತೆ ಎಂದು ಟೀಕಿಸಿದರು.

ಭಯೋತ್ಪಾದನೆ ಬೇರುಸಹಿತ ಕಿತ್ತು ಹಾಕುವ ಸರ್ವ ಪ್ರಯತ್ನ..
ಮೋದಿಜೀ, ಅಮಿತ್ ಶಾ ಜೀ, ಈಗಿನ ಭಾರತ ಸರಕಾರದ ಮೇಲೆ ಜನರಿಗೆ ವಿಶ್ವಾಸ ಇದೆ. ಇವರು ಭಯೋತ್ಪಾದಕರ ಜೊತೆ ಸೇರಿ ಲಾಭ- ನಷ್ಟದ ಲೆಕ್ಕಾಚಾರ ಹಾಕುವುದಿಲ್ಲ. ಅವರನ್ನು ಬೇರು ಸಹಿತ ಕಿತ್ತು ಹಾಕುವ ಸರ್ವ ಪ್ರಯತ್ನವನ್ನೂ ಮಾಡುತ್ತಾರೆ; ಮಾಡಿದ್ದಾರೆ ಎಂದು ನುಡಿದರು.
ನೀವೇನು ಮಾಡಿದ್ದೀರಿ? ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಪರ ವಕಾಲತ್ತು ವಹಿಸಿದ ವಕೀಲರ ಪಟ್ಟಿ ಕೊಡಲೇ? ಎಂದು ಕೇಳಿದರು. ನಿಮ್ಮ ಯಾವ್ಯಾವ ಕಾಂಗ್ರೆಸ್ ನಾಯಕರು ಅವನ ಪರ ಮಾತನಾಡಿದರೆಂದು ಲಿಸ್ಟ್ ಕೊಡಲೇ ಎಂದು ಪ್ರಶ್ನಿಸಿದರು.

ಈಚೆಗೆ ಗುಜರಾತ್, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಎನ್‍ಐಎ, ಎಟಿಎಸ್ ಹಲವು ಭಯೋತ್ಪಾದಕರನ್ನು ಬಂಧಿಸಿದ್ದವು. ಅವರು ಇಡೀ ದೇಶದಲ್ಲಿ ವಿಧ್ವಂಸಕ ಕೃತ್ಯ ಮಾಡಲು ಸಂಚು ನಡೆಸಿದ್ದು, ಅಪಾಯಕಾರಿ ರಿಸಿನ್‍ನಂಥ ವಿಷವನ್ನು ತಯಾರಿಸಿ ಸಾಮೂಹಿಕ ನರಮೇಧಕ್ಕೆ ಯೋಜನೆ ರೂಪಿಸಿದ್ದನ್ನು ಎನ್‍ಐಎ, ಎಟಿಎಸ್ ಮತ್ತು ಪೊಲೀಸ್ ಇಲಾಖೆ ವಿಫಲಗೊಳಿಸಿದೆ ಎಂದು ವಿವರಿಸಿದರು.
ಅಪಾರ ಪ್ರಮಾಣದಲ್ಲಿ ಆರ್‍ಡಿಎಕ್ಸ್ ಕೂಡ ವಶಕ್ಕೆ ಪಡೆದಿದೆ. ಯೋಜನಾಬದ್ಧವಾದ ಭಯೋತ್ಪಾದನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದನ್ನು ಊಹಿಸಬಹುದು. ನಮ್ಮ ಬೇಹುಗಾರಿಕಾ ವ್ಯವಸ್ಥೆ ಎನ್‍ಐಎ ಸಾಕಷ್ಟು ಎಚ್ಚರ ವಹಿಸಿದ್ದರಿಂದ ದೊಡ್ಡ ಅಪಾಯ ತಪ್ಪಿದೆ ಎಂದು ವಿಶ್ಲೇಷಿಸಿದರು. ಇದರಿಂದ ಹತಾಶರಾದ ಭಯೋತ್ಪಾದಕರು ಕೆಂಪು ಕೋಟೆಯನ್ನು ಗುರಿಯಾಗಿ ಇಟ್ಟುಕೊಂಡು, ತಾವಿನ್ನೂ ಬದುಕಿದ್ದೇವೆ ಎಂಬುದನ್ನು ತಮ್ಮ ಭಯೋತ್ಪಾದಕ ಕೃತ್ಯದ ಮೂಲಕ ತೋರಿಸಿದ್ದಾರೆ ಎಂದು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಕಾರು ಸ್ಫೋಟ ತನಿಖೆಯಲ್ಲಿ ಮಹತ್ವದ ಬೆಳವಣಿಗೆ